ದೇಶ

ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು: ನವಜೋತ್ ಸಿಂಗ್ ಸಿಧುರಿಂದ ಸಿಎಂ ಚರಣಜಿತ್ ಸಿಂಗ್ ಚನ್ನಿ ಭೇಟಿ

Lingaraj Badiger

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರೊಂದಿಗೆ ಗುರುವಾರ ಮಾತುಕತೆ ನಡೆಸುವುದಾಗಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಹೇಳಿದ್ದಾರೆ.

"ಮುಖ್ಯಮಂತ್ರಿಗಳು ನನ್ನನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಚಂಡೀಗಢದಲ್ಲಿ ಇಂದು ಮಧ್ಯಾಹ್ನ 3:00 ಗಂಟೆಗೆ ಸಿಎಂ ಅವರನ್ನು ಭೇಟಿ ಮಾಡುವುದಾಗಿ ಸಿಧು ತಿಳಿಸಿದ್ದಾರೆ.

ಕಳೆದ ಮಂಗಳವಾರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿಧು, ಪೊಲೀಸ್ ಮಹಾನಿರ್ದೇಶಕರ ಮತ್ತು ರಾಜ್ಯದ ಅಡ್ವೋಕೇಟ್ ಜನರಲ್ ನೇಮಕಾತಿಯನ್ನು ಪ್ರಶ್ನಿಸಿದ್ದರು ಮತ್ತು "ಕಳಂಕಿತ"ರನ್ನು ನೇಮಕ ಮಾಡಲಾಗಿದೆ ಎಂದು ದೂರಿದ್ದರು.

ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಿದ ನಂತರ ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡಿದ್ದರು. 

ಇನ್ನು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ ಚನ್ನಿ, "ನಾನು ಸಿಧು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪಕ್ಷ ಸರ್ವೋಚ್ಚವಾಗಿದೆ ಮತ್ತು ಸರ್ಕಾರವು ಪಕ್ಷದ ಸಿದ್ಧಾಂತವನ್ನು ಸ್ವೀಕರಿಸುತ್ತದೆ ಮತ್ತು ಅದನ್ನು ಅನುಸರಿಸುತ್ತದೆ. ನೀವು ಬನ್ನಿ, ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ಸಿಧುಗೆ ಹೇಳಿರುವುದಾಗಿ ತಿಳಿಸಿದ್ದರು.

SCROLL FOR NEXT