ದೇಶ

ಶಿಂಧೆ ಬಣಕ್ಕೆ ಶಿವಸೇನಾ ಚಿಹ್ನೆ ನೀಡುವ ಬಗ್ಗೆ ನಿರ್ಧಾರ ಬೇಡ: ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ; ಉದ್ಧವ್ ಠಾಕ್ರೆ ನಿರಾಳ

Shilpa D

ನವದೆಹಲಿ: ‘ತಮ್ಮ ಬಣವನ್ನೇ ನಿಜವಾದ ಶಿವಸೇನಾ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡುವಂತೆ ಏಕನಾಥ ಶಿಂದೆ ಬಣ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು’ ಎಂದು ಸುಪ್ರೀಂ ಕೋರ್ಟ್ ಗುರುವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಶಿಂದೆ ಬಣದ ಅರ್ಜಿಯ ಕುರಿತ ನೋಟಿಸ್‌ಗೆ ಉತ್ತರಿಸಲು ಉದ್ಧವ್ ಠಾಕ್ರೆ ನೇತೃತ್ವದ ಬಣವು ಸಮಯ ಕೋರಿದರೆ, ಆ ಮನವಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿತು.

ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣಗಳನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಕುರಿತು ಸೋಮವಾರದೊಳಗೆ ಆದೇಶ ನೀಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ ತಿಳಿಸಿತು.

ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ ಮತ್ತು ರಾಜ್ಯದ ಹಾಲಿ ಸಿಎಂ ಏಕನಾಥ್ ಶಿಂಧೆ ಬಣಗಳ ನಡುವಿನ ಶಿವಸೇನೆ ಪಕ್ಷದ ಮೇಲಿನ ಹಿಡಿತಕ್ಕಾಗಿ ಪೈಪೋಟಿ ನಡೆಯುತ್ತಿದೆ. ಶಿವಸೇನೆ ಪಕ್ಷದ ಬಿಲ್ಲು ಬಾಣದ ಚಿಹ್ನೆ ಬಳಸಲು ಎರಡು ಬಣಗಳು ಚುನಾವಣಾ ಆಯೋಗದ ಮೆಟ್ಟಿಲು ಹತ್ತಿವೆ. ಉದ್ಧವ್ ಠಾಕ್ರೆ ನೇತೃತ್ವದ ಬಣವು ಶಿಂಧೆ ಬಣದ ಅರ್ಜಿಯ ಮೇಲಿನ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೋರಿದರೆ, ಪ್ರಕರಣವನ್ನು ಮುಂದೂಡಲು ಅವರ ಮನವಿಯನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಹೇಳಿದೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನಲ್ಲಿ ಒಳಗೊಂಡಿರುವ ಕೆಲವು ಸಮಸ್ಯೆಗಳನ್ನು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೆ ಎಂದು ಆಗಸ್ಟ್ 8ರ ಸೋಮವಾರ ದಂದು ನಿರ್ಧರಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

SCROLL FOR NEXT