ದೇಶ

ಅತ್ಯಾಚಾರಕ್ಕೆ ನೀಡುವ ಮರಣದಂಡನೆ ಶಿಕ್ಷೆಯಿಂದಾಗಿಯೇ​​ ಸಂತ್ರಸ್ತರ ಹತ್ಯೆಗಳು ಹೆಚ್ಚಾಗಿದೆ: ರಾಜಸ್ಥಾನ ಸಿಎಂ ವಿವಾದಾತ್ಮಕ ಹೇಳಿಕೆ

Srinivasamurthy VN

ನವದೆಹಲಿ: ಅತ್ಯಾಚಾರಕ್ಕೆ ನೀಡುವ ಮರಣದಂಡನೆ ಶಿಕ್ಷೆಯಿಂದಾಗಿಯೇ​​ ಸಂತ್ರಸ್ತರ ಹತ್ಯೆಗಳು ಹೆಚ್ಚಾಗಿದೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೂಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೂಟ್ ಅವರು, 'ಅತ್ಯಾಚಾರದ ಅಪರಾಧಕ್ಕೆ ಮರಣದಂಡನೆ ಶಿಕ್ಷೆ ನೀಡುವುದರಿಂದಾಗಿಯೇ ಲೈಂಗಿಕ ದೌರ್ಜನ್ಯಕ್ಕೊಳಗಾದವರ ಹತ್ಯೆಗಳು ಹೆಚ್ಚಾಗುತ್ತಿದೆ. ನಿರ್ಭಯಾ ಪ್ರಕರಣದ ನಂತರ, ಆರೋಪಿಗಳನ್ನು ಗಲ್ಲಿಗೇರಿಸಬೇಕೆಂಬ ಬೇಡಿಕೆ ಹೆಚ್ಚಿತು. ಇದಾದ ನಂತರ ಕಾನೂನು ಜಾರಿಗೆ ಬಂದಿತು. ಅಂದಿನಿಂದ ಅತ್ಯಾಚಾರದ ನಂತರ ಸಂತ್ರಸ್ತೆಯರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ. 

ನಿರ್ಭಯಾ ಪ್ರಕರಣದ (Nirbhaya case) ನಂತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನಿನಿಂದಾಗಿ, ಅತ್ಯಾಚಾರದ ನಂತರ ಕೊಲೆ ಘಟನೆಗಳು ಹೆಚ್ಚಾಗುತ್ತಿವೆ. ಇದು ದೇಶದಲ್ಲಿ ಅಪಾಯಕಾರಿ ಪ್ರವೃತ್ತಿಯಾಗಿದೆ. ಅತ್ಯಾಚಾರವೆಸಗುವ ವ್ಯಕ್ತಿ ಸಂತ್ರಸ್ತೆ ತನ್ನ ವಿರುದ್ಧ ಸಾಕ್ಷಿಯಾಗುತ್ತಾಳೆ ಎಂದು ಭಾವಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ಆರೋಪಿಯು ಸಂತ್ರಸ್ತೆಯನ್ನು ಕೊಲ್ಲುವುದು ಸರಿ ಎಂದು ಅಂದುಕೊಳ್ಳುತ್ತಾನೆ. ದೇಶದಾದ್ಯಂತ ಬರುತ್ತಿರುವ ವರದಿಗಳು ಅತ್ಯಂತ ಅಪಾಯಕಾರಿ ಪ್ರವೃತ್ತಿ, ದೇಶದ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.

ಗೆಹ್ಲೂಟ್ ಹೇಳಿಕೆಗೆ ಬಿಜೆಪಿ ಕಿಡಿ
ಇನ್ನು ಅಶೋಕ್ ಗೆಹ್ಲೋಟ್ ಹೇಳಿಕೆ ದುರದೃಷ್ಟಕರ. ಕಳೆದ ಮೂರು ವರ್ಷಗಳಲ್ಲಿ, ರಾಜಸ್ಥಾನವು ಹುಡುಗಿಯರ ಮೇಲೆ ದೌರ್ಜನ್ಯಗಳನ್ನು ನಡೆಸುವ ಕೇಂದ್ರವಾಗಿದೆ. ತಮ್ಮ ವೈಫಲ್ಯಗಳನ್ನು ಮರೆಮಾಚಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ವಿಷಯ ಬದಲಿಸುವವರ ದುರದೃಷ್ಟಕರ ಬೇರೇನೂ ಇರಲಾರದು ಎಂದು ಕೇಂದ್ರ ಸಚಿವ ಗಜೇಂದ್ರ ಎಸ್ ಶೇಖಾವತ್ ಹೇಳಿದ್ದಾರೆ. 

ಅಂತೆಯೇ ಗೆಹ್ಲೋಟ್ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮೌನವನ್ನು ಬಿಜೆಪಿ ಪ್ರಶ್ನಿಸಿದ್ದು, ಮರ್ದೋಂಕಾ ಪ್ರದೇಶ್ ಹಾಗಾಗಿ ಅತ್ಯಾಚಾರಗಳು ನಡೆಯುತ್ತವೆ. ಪ್ರಿಯಾಂಕಾ ಜೀ ಮೌನವಾಗಿದ್ದಾರೆಯೇ?” ಎಂದು ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಟ್ವೀಟ್ ಮಾಡಿದ್ದಾರೆ. 

ಇದೇ ಮೇ ತಿಂಗಳಲ್ಲಿ, ಗೆಹ್ಲೋಟ್ ಅವರು ನಿರುದ್ಯೋಗವನ್ನು ಅತ್ಯಾಚಾರಕ್ಕೆ ಲಿಂಕ್ ಮಾಡಿ ಹೇಳಿಕೆ ನೀಡಿದ್ದು ಭಾರೀ ಟೀಕೆಗೊಳಗಾಗಿತ್ತು.
 

SCROLL FOR NEXT