ದೇಶ

ಕೋವಿಡ್ ಪ್ರಕರಣಗಳ ಹೆಚ್ಚಳ: ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ, ಧರಿಸದಿದ್ದರೆ 500 ರೂ. ದಂಡ

Ramyashree GN

ನವದೆಹಲಿ: ಕೋವಿಡ್ ಪ್ರಕರಣಗಳ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಗುರುವಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದು, ನಿಯಮ ಉಲ್ಲಂಘಿಸಿದರೆ 500 ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದೆ.

ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಈ ದಂಡವು ನಾಲ್ಕು ಚಕ್ರದ ಖಾಸಗಿ ವಾಹನಗಳಲ್ಲಿ ಒಟ್ಟಿಗೆ ಪ್ರಯಾಣಿಸುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ.

ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ (ಎಲ್‌ಎನ್‌ಜೆಪಿ) ವಂಶವಾಹಿ ಸಂರಚನೆ ವಿಶ್ಲೇಷಣೆಗಾಗಿ (ಜಿನೋಮ್‌ ಸೀಕ್ವೆನ್ಸಿಂಗ್) ಕಳುಹಿಸಲಾಗಿದ್ದ ಮಾದರಿಗಳಲ್ಲಿ ಕೊರೊನಾ ವೈರಸ್‌ನ ರೂಪಾಂತರವಾದ ಓಮೈಕ್ರಾನ್‌ನ ಹೊಸ ಉಪತಳಿ ಪತ್ತೆಯಾಗಿದೆ.

ಪರೀಕ್ಷೆಗೆ ಕಳುಹಿಸಲಾಗಿದ್ದ ಹಲವು ಮಾದರಿಗಳಲ್ಲಿ ಓಮೈಕ್ರಾನ್‌ನ ಉಪತಳಿಯಾದ BA 2.75 ಪತ್ತೆಯಾಗಿದೆ. ಇದು ಹೆಚ್ಚಿನ ಪ್ರಸರಣ ದರವನ್ನು ಹೊಂದಿದೆ ಎಂದು ಎಲ್‌ಎನ್‌ಜೆಪಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕುಮಾರ್ ತಿಳಿಸಿದ್ದಾರೆ.

ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಹೀಗಾಗಿ ದೆಹಲಿಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದವರಿಗೆ 500 ರೂಪಾಯಿ ದಂಡ ವಿಧಿಸುವುದಾಗಿ ದೆಹಲಿ ಸರ್ಕಾರ ಹೇಳಿದೆ.

ಬುಧವಾರ, ದೆಹಲಿಯಲ್ಲಿ 2,146 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರ ಶೇ 17.83 ಕ್ಕೆ ಏರಿದೆ. ರಾಷ್ಟ್ರ ರಾಜಧಾನಿಯಲ್ಲಿ 8 ಜನರು ಕೋವಿಡ್‌ನಿಂದಾಗಿ ಸಾವಿಗೀಡಾಹಿದ್ದಾರೆ. ಇದು ಸುಮಾರು 180 ದಿನಗಳಲ್ಲಿ ಅತಿ ಹೆಚ್ಚು ಮರಣ ಪ್ರಮಾಣವಾಗಿದೆ.

ದೆಹಲಿಯಲ್ಲಿ ಮಂಗಳವಾರದಂದು 2,495 ಕೋವಿಡ್ ಪ್ರಕರಣಗಳು ವರದಿ ಆಗಿದ್ದರೆ, ಬುಧವಾರ 2,146 ಪ್ರಕರಣಗಳು ದಾಖಲಾಗಿದ್ದವು.

SCROLL FOR NEXT