ದೇಶ

ಶರಣಾಗಬೇಕಿದ್ದ ಅಪಹರಣ ಪ್ರಕರಣದ ಆರೋಪಿ ಈಗ ಬಿಹಾರ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ!

Ramyashree GN

ಪಾಟ್ನಾ: ಬಿಹಾರದ ನೂತನ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕಾರ್ತಿಕೇಯ್ ಸಿಂಗ್ ಅವರು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಈ ಆರೋಪದ ಮೇಲೆ ನ್ಯಾಯಾಲಯ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದು, ಕಾನೂನು ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದಾರೆ.

ಸಿಂಗ್ ಅವರನ್ನು ಅಕ್ರಮ ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲು ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಬೇರ್ ಜೈಲಿನಲ್ಲಿರುವ ಡಾನ್ ಪಟ್ಟದಿಂದ ರಾಜಕಾರಣಿಯಾಗಿರುವ ಅನಂತ್ ಸಿಂಗ್ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ.

2014ರಲ್ಲಿ ನಡೆದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕೇಯ ಸಿಂಗ್ ವಿರುದ್ಧ ದಾನಾಪುರ ನ್ಯಾಯಾಲಯ ಜುಲೈ 16ರಂದು ಬಂಧನ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ಆಗಸ್ಟ್ 16ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ವಿಪರ್ಯಾಸವೆಂದರೆ, ಕಾರ್ತಿಕೇಯ್ ಸಿಂಗ್ ಅವರಿಗೆ ಕಾನೂನು ಖಾತೆಯನ್ನು ನೀಡಲಾಗಿದೆ.

ಸಿಂಗ್ ಅವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ ಮತ್ತು ಇದುವರೆಗೆ ನ್ಯಾಯಾಲಯದಲ್ಲಿ ಯಾವುದೇ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೂಡ ಸಲ್ಲಿಸಿಲ್ಲ. ಪ್ರಾಸಿಕ್ಯೂಷನ್ ಪ್ರಕಾರ, 2014ರಲ್ಲಿ ಬಿಲ್ಡರ್ ರಾಜೀವ್ ರಂಜನ್ ಅವರನ್ನು ಅಪಹರಿಸಲಾಗಿತ್ತು. ಇದರಲ್ಲಿ ಸಿಂಗ್ ಅವರ ಕೈವಾಡ ಇದೆ ಎನ್ನಲಾಗಿದೆ.

ಈಮಧ್ಯೆ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಬಿಹಾರದ ಹೊಸ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದ್ದು, ಸರ್ಕಾರವು ರಾಜ್ಯದಲ್ಲಿ ಜಂಗಲ್ ರಾಜ್ ಮರಳುವಂತೆ ಮಾಡುತ್ತಿದೆ ಎಂದು ಆರೋಪಿಸಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಕ್ರಿಮಿನಲ್ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವವರಿಗೆ ಸ್ಥಾನ ನೀಡಿದ್ದಕ್ಕಾಗಿ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕಿಡ್ನಾಪ್ ಪ್ರಕರಣದಲ್ಲಿ ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ. ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿಯೂ ಎಲ್ಲಾ ವಿವರಗಳನ್ನು ನೀಡಿದ್ದೇನೆ ಮತ್ತು ಚುನಾವಣಾ ಆಯೋಗದಿಂದ ಏನನ್ನೂ ಮುಚ್ಚಿಟ್ಟಿಲ್ಲ ಎಂದು ಸಿಂಗ್ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

'ನನ್ನನ್ನು ನಾನು ನಿರಪರಾಧಿ ಎಂದು ಪರಿಗಣಿಸುತ್ತೇನೆ. ಆರೋಪ ಮಾಡುವುದಕ್ಕೂ ಅದನ್ನು ಸಾಬೀತು ಪಡಿಸುವುದಕ್ಕೂ ವ್ಯತ್ಯಾಸವಿರುವುದರಿಂದ ಪ್ರಕರಣ ದಾಖಲಿಸುವುದು ವಿಭಿನ್ನವಾಗಿದೆ. ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲ ಮತ್ತು ಬಿಜೆಪಿಯ ಆರೋಪಕ್ಕೆ ಯಾವುದೇ ಆಧಾರವಿಲ್ಲ' ಎಂದು ಅವರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಿಖಿಲ್ ಆನಂದ್, ನಿತೀಶ್ ಕುಮಾರ್ ಸರ್ಕಾರದ ಸಚಿವ ಸಂಪುಟವು ಅತ್ಯಂತ ಭಯಾನಕ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಈ ಕೆಟ್ಟ ಜನರು ಬಿಹಾರದ ಜನರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಪಹರಣ ಪ್ರಕರಣದಲ್ಲಿ ಬೇಕಾಗಿರುವ ವ್ಯಕ್ತಿಯೊಬ್ಬರು ಬಿಹಾರದ ಕಾನೂನು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಹಾರದ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ವ್ಯಕ್ತಿಯು ತಾನು ಅಪಹರಣ ಪ್ರಕರಣವೊಂದರಲ್ಲಿ ಬೇಕಾಗಿರುವ ಅಂಶವನ್ನು ಹೇಗೆ ಮರೆಮಾಚುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಆರ್‌ಜೆಡಿಯ ಒತ್ತಡಕ್ಕೆ ನಿತೀಶ್‌ ಕುಮಾರ್‌ ಮಣಿಯುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.

SCROLL FOR NEXT