ದೇಶ

ಅಬಕಾರಿ ಹಗರಣ: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿ 15 ಮಂದಿ ವಿರುದ್ಧ ಸಿಬಿಐ ಎಫ್ಐಆರ್

Lingaraj Badiger

ನವದೆಹಲಿ: ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 15 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದೆ. 

ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಸಿಸೋಡಿಯಾ ಅವರ ನಿವಾಸ ಸೇರಿದಂತೆ 21 ಸ್ಥಳಗಳಲ್ಲಿ ಶೋಧ ನಡೆಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಹೊರತಂದ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಸಿಬಿಐ 15 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಈ ಸಂಬಂಧ ಎಎಪಿ ನಾಯಕನ ಮನೆ, ಐಎಎಸ್ ಅಧಿಕಾರಿ ಮತ್ತು ಮಾಜಿ ಅಬಕಾರಿ ಆಯುಕ್ತ ಅರವ್ ಗೋಪಿ ಕೃಷ್ಣ ಅವರ ನಿವಾಸ ಮತ್ತು ಇತರ 19 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಇನ್ನಿಬ್ಬರು ಅಧಿಕಾರಿಗಳ ನಿವೇಶನಗಳನ್ನೂ ಶೋಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ಸಿಸೋಡಿಯಾ ಅವರ ನಿವಾಸವನ್ನು ತಲುಪುತ್ತಿದ್ದಂತೆ, ಸಿಬಿಐಗೆ ಸ್ವಾಗತ. ಆದರೆ  ಪಿತೂರಿಗಳು ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಮತ್ತು ಉತ್ತಮ ಶಿಕ್ಷಣವನ್ನು ನೀಡುವ ಕೆಲಸದಲ್ಲಿ ಮುಂದುವರಿಯುವ ನಮ್ಮ ಸಂಕಲ್ಪವನ್ನು ತಡೆಯುವುದಿಲ್ಲ ಎಂದು ದೆಹಲಿ ಡಿಸಿಎಂ ಟ್ವೀಟ್ ಮಾಡಿದ್ದರು.

ಮತ್ತೊಂದೆಡೆ, ಬಿಜೆಪಿ ಸಹ ದೆಹಲಿ ಉಪಮುಖ್ಯಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅಬಕಾರಿ ಖಾತೆಯನ್ನು ಹೊಂದಿರುವ ಸಿಸೋಡಿಯಾ ಅವರು "ಎಕ್ಸ್ಯೂಸ್ ಮಂತ್ರಿ" ಆಗಿದ್ದಾರೆ. "ಮದ್ಯ ಪರವಾನಗಿ ಮತ್ತು ಅದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಆರೋಪಿಸಿದ್ದಾರೆ.

ಕೇಜ್ರಿವಾಲ್ ಸರ್ಕಾರ ನೂರಾರು ಕೋಟಿ ರೂಪಾಯಿಗಳ ಮದ್ಯದ ಹಗರಣದಲ್ಲಿ ಭಾಗಿಯಾಗಿದೆ ಎಂದು ದೆಹಲಿ ಬಿಜೆಪಿ ಆರೋಪಿಸಿದೆ.

SCROLL FOR NEXT