ದೇಶ

ಕೇರಳದಲ್ಲಿ ಭಾರಿ ಮಳೆ: ಭೂಕುಸಿತದಿಂದ ಒಂದೇ ಕುಟುಂಬದ ಐವರು ಸಾವು; 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Ramyashree GN

ಇಡುಕ್ಕಿ: ಇಲ್ಲಿನ ಹಳ್ಳಿಯೊಂದರಲ್ಲಿ ಭಾರಿ ಮಳೆಯಿಂದ ಸೋಮವಾರ ನಸುಕಿನಲ್ಲಿ ಉಂಟಾದ ಭೂಕುಸಿತದಿಂದಾಗಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೋಡುಪುಳ ಸಮೀಪದ ಕಂಜರ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ನಿವಾಸಿಗಳಾದ ತಂಕಮ್ಮ (80), ಆಕೆಯ ಮಗ ಸೋಮನ್ (52), ಆತನ ಪತ್ನಿ ಶಾಜಿ (50), ಅವರ ಮಕ್ಕಳಾದ ಶಿಮಾ (30) ಮತ್ತು ದೇವಾನಂದ್ (5) ಎಂದು ಗುರುತಿಸಲಾಗಿದೆ.

ಬೆಳಗಿನ ಜಾವ 2.30ರ ಸುಮಾರಿಗೆ ಕುಟುಂಬದ ಮನೆಯಲ್ಲಿ ದುರಂತ ಸಂಭವಿಸಿದೆ. ರಕ್ಷಣಾ ಸಿಬ್ಬಂದಿ ಐವರ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದ ಗುಡ್ಡಗಾಡು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ.

ಕೇರಳದ 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಕೇರಳದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಸೋಮವಾರ 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಅಲ್ಲದೆ, ಗುಡ್ಡಗಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಿದೆ.

ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಿಗೆ ಸೋಮವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಂಗಳವಾರ ಕಾಸರಗೋಡು ಹೊರತುಪಡಿಸಿ 13 ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಬುಧವಾರ ಪಾಲಕ್ಕಾಡ್ ಹೊರತುಪಡಿಸಿ 13 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.

ಕೇರಳ ಮತ್ತು ಲಕ್ಷದ್ವೀಪದ ಕರಾವಳಿಯಲ್ಲಿ ಸೆಪ್ಟೆಂಬರ್ 1 ರವರೆಗೆ ಮೀನುಗಾರಿಕೆಯನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ.

SCROLL FOR NEXT