ದೇಶ

ಗುಜರಾತ್ ನ 17 ಸಚಿವರ ಪೈಕಿ ನಾಲ್ವರ ಮೇಲಿದೆ ಕ್ರಿಮಿನಲ್ ಪ್ರಕರಣಗಳು

Srinivas Rao BV

ಅಹ್ಮದಾಬಾದ್: ಗುಜರಾತ್ ಸಿಎಂ ಆಗಿ ಎರಡನೇ ಅವಧಿಗೆ ಭುಪೇಂದ್ರ ಪಟೇಲ್ ಅಧಿಕಾರ ವಹಿಸಿಕೊಂಡಿದ್ದು, 16 ಸಚಿವರು ಭುಪೇಂದ್ರ ಪಟೇಲ್ ಜೊತೆ ಪ್ರಮಾಣ ವಚನ ಸ್ವೀಕರಿಸಿದ್ದರು.

ಹೊಸ ಸಂಪುಟದಲ್ಲಿ ನಾಲ್ವರು ಸಚಿವರಿಗೆ ಕ್ರಿಮಿನಲ್ ಹಿನ್ನೆಲೆ ಇದ್ದು,  ಓರ್ವನ ವಿರುದ್ಧ ಗಂಭೀರ ಅಪರಾಧದ ಆರೋಪವಿದೆ ಎಂದು ಎಡಿಆರ್ ವರದಿ ಹೇಳಿದೆ. ಮೀನುಗಾರಿಕೆ ಹಾಗೂ ಪಶುಸಂಗೋಪನೆ ಸಚಿವ ಪುರುಷೋತ್ತಮ್ ಭಾಯ್ ಸೋಲಂಕಿ ವಿರುದ್ಧ ಅತಿ ಹೆಚ್ಚು ಪ್ರಕರಣಗಳಿದ್ದು, ಐಪಿಸಿ ಸೆಕ್ಷನ್ ಅಡಿ ನಾಲ್ಕು ಗಂಭೀರ ಪ್ರಕರಣಗಳು ದಾಖಲಾಗಿವೆ. ಗೃಹ ಸಚಿವ ಹರ್ಷ್ ಸಂಘ್ವಿ ವಿರುದ್ಧವೂ ಒಂದು ಪ್ರಕರಣವಿದೆ.
 
ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಹಾಗೂ ಕೃಷಿ ಸಚಿವ ಪಟೆಲ್ ರಾಘವ್ ಜೀ ವಿರುದ್ಧ ತಲಾ ಒಂದೊಂದು ಪ್ರಕರಣಗಳು ಬಾಕಿ ಇದ್ದು, ಈ ಸಚಿವರ ಪೈಕಿ ಶೇ.94 ರಷ್ಟು ಮಂದಿ ಕೋಟ್ಯಾಧಿಪತಿಗಳಾಗಿದ್ದಾರೆ. ಎಡಿಆರ್ ವರದಿಯ ಪ್ರಕಾರ 16 ಮಂದಿ ಅಥವ ಶೇ.94 ಮಂದಿ ಕೋಟ್ಯಾಧಿಪತಿಗಳಾಗಿದ್ದು, 17 ಸಚಿವರ ಸರಾಸರಿ ಆಸ್ತಿ 32.70 ಕೋಟಿ ರೂಪಾಯಿಗಳಿದೆ ಎಂದು ತಿಳಿದುಬಂದಿದೆ.

ಸಿಧ್ ಪುರ್ ಕ್ಷೇತ್ರದ ಶಾಸಕ ಬಲವಂತ್ ಸಿನ್ಹ ಚಂದನ್ ಸಿನ್ಹ ರಜಪೂತ್ ಸಚಿವ ಸಂಪುಟದಲ್ಲಿ ಅತ್ಯಂತ ಶ್ರೀಮಂತ ಸಚಿವರಾಗಿದ್ದು, 372.65 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ದೇವಗಧಬರಿಯಾದ ಶಾಸಕರಾಗಿರುವ ಸಚಿವ ಖಬದ್ ಬಚುಭಾಯಿ ಮಗನ್‌ಭಾಯ್ 92.85 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದು ಅತ್ಯಂತ ಕಡಿಮೆ ಆಸ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
 
14 ಸಚಿವರು ತಮ್ಮ ಸಾಲದ ಬಗ್ಗೆಯೂ ಘೋಷಣೆ ಮಾಡಿಕೊಂಡಿದ್ದು, ಸಿಧ್ ಪುರ್ ಕ್ಷೇತ್ರದ ಬಲವಂತ್ ಸಿನ್ಹ್ ಚಂದನ್ ಸಿನ್ಹ್ ರಜಪೂತ್ 12.59 ಕೋಟಿ ಸಾಲದ ಮೂಲಕ ಅತಿ ಹೆಚ್ಚು ಸಾಲ ಹೊಂದಿರುವ ಸಚಿವರಾಗಿದಾರೆ. ಶೇ.35 ರಷ್ಟು ಸಚಿವರು ಅಥವಾ 6 ಮಂದಿ 8 ನೇ ತರಗತಿಯಿಂದ 12 ನೇ ತರಗತಿ ವ್ಯಾಸಂಗ ಮಾಡಿದ್ದಾರೆ, 8 ಸಚಿವರು ಪದವಿ ಪಡೆದಿದ್ದರೆ. 18 ಸಚಿವರು ಡಿಪ್ಲೊಮಾ ಪಡೆದಿದ್ದಾರೆ.

SCROLL FOR NEXT