ದೇಶ

ಗಡಿ ವಿವಾದ: ದೆಹಲಿಯಲ್ಲಿ ನಡೆದ ಸಿಎಂಗಳ ಸಭೆ ಏನನ್ನೂ ಸಾಧಿಸಿಲ್ಲ; ಕರ್ನಾಟಕದ ಪರವಾಗಿದೆ ಎಂದ ಉದ್ಧವ್

Lingaraj Badiger

ಮುಂಬೈ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಡೆಸಿದ ಸಭೆಯಿಂದ ಏನನ್ನೂ ಸಾಧಿಸಿಲ್ಲ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಗುರುವಾರ ಹೇಳಿದ್ದಾರೆ.

ಮಹಾ ವಿಕಾಸ್ ಅಘಾಡಿ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗಿನ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ಟ್ವೀಟರ್ ಖಾತೆಯಲ್ಲಿ ಮಾಡಿದ ಕೆಲವು ಪೋಸ್ಟ್ ಗಳನ್ನು ಅವರು ಮಾಡಿಲ್ಲ ಎಂದು ನಂಬುವುದು ಕಷ್ಟ ಎಂದಿದ್ದಾರೆ.

"ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಡೆಸಿದ ಸಭೆಯಿಂದ ಏನು ಸಾಧಿಸಲಾಗಿದೆ? ಇದು ನಮ್ಮ ಗಾಯಗಳಿಗೆ ಉಪ್ಪು ಸವರಿದೆ. ಎಂದಿನಂತೆ, ಚರ್ಚೆಗಳು ಕರ್ನಾಟಕದ ಪರವಾಗಿವೆ" ಎಂದು ಠಾಕ್ರೆ ಹೇಳಿದ್ದಾರೆ.

ಕರ್ನಾಟಕವು ಬೆಳಗಾವಿಯಲ್ಲಿ(ಉತ್ತರ ಕರ್ನಾಟಕದ ಎರಡು ರಾಜ್ಯಗಳ ನಡುವಿನ ವಿವಾದದ ಪ್ರಮುಖ ಭಾಗವಾಗಿರುವ ನಗರ) ವಿಧಾನಸಭೆಯ ಅಧಿವೇಶನ ಏಕೆ ನಡೆಸುತ್ತದೆ? ಗಡಿ ವಿವಾದವು ಸುಪ್ರೀಂ ಕೋರ್ಟ್‌ನಲ್ಲಿದ್ದಾಗ ಎರಡನೇ ರಾಜಧಾನಿಯ ಸ್ಥಾನಮಾನವನ್ನು ಏಕೆ ನೀಡಿತು? ಎಂಬುದನ್ನು ತಿಳಿಸಬೇಕು ಎಂದು ಮಹಾರಾಷ್ಟ್ರ ಮಾಜಿ ಸಿಎಂ ಒತ್ತಾಯಿಸಿದ್ದಾರೆ.

''ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳು(ಉತ್ತರ ಕರ್ನಾಟಕದ) ಮಹಾರಾಷ್ಟ್ರಕ್ಕೆ ಸೇರಲು ಬಯಸುತ್ತವೆ. ಈ ಬೇಡಿಕೆಗೆ ಏಕೆ ಉತ್ತರವಿಲ್ಲ’’ ಎಂದು ಠಾಕ್ರೆ ಪ್ರಶ್ನಿಸಿದರು.

ಕೆಲವು 'ನಕಲಿ' ಟ್ವಿಟರ್ ಹ್ಯಾಂಡಲ್‌ಗಳು ತಮ್ಮ ಹೆಸರಿನಲ್ಲಿ ಉದ್ವಿಗ್ನತೆ ಹೆಚ್ಚಿಸುವ ಟ್ವೀಟ್‌ಗಳನ್ನು ಪೋಸ್ಟ್ ಮಾಡುತ್ತಿವೆ ಎಂದು ಹೇಳಲು ಕರ್ನಾಟಕದ ಮುಖ್ಯಮಂತ್ರಿ ದೆಹಲಿಯಲ್ಲಿ ಬುಧವಾರದ ನಡೆದ ಸಭೆಯವರೆಗೂ ಏಕೆ ಕಾಯುತ್ತಿದ್ದರು ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

SCROLL FOR NEXT