ದೇಶ

ಸಂಜಯ್ ರಾವತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ: ಸಿಎಂ ಬೊಮ್ಮಾಯಿ

Lingaraj Badiger

ಬೆಳಗಾವಿ: ಶಿವಸೇನೆ(ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಅವರನ್ನು ದೇಶದ್ರೋಹಿ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರಚೋದನಕಾರಿ ಹೇಳಿಕೆ ನೀಡಿದ ಸೇನಾ ನಾಯಕನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಗುರುವಾರ ಹೇಳಿದ್ದಾರೆ.

ಚೀನಾ ಭಾರತದ ಗಡಿ ಪ್ರವೇಶಿಸಿದಂತೆ ನಾನು ಕರ್ನಾಟಕಕ್ಕೆ ಪ್ರವೇಶಿಸುತ್ತೇನೆ ಎಂದಿದ್ದ ರಾವತ್ ವಿರುದ್ಧ ತೀವ್ರ  ಆಕ್ರೋಶ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ, ಪ್ರಚೋದನಕಾರಿ ಹೇಳಿಕೆಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಇಂದು ವಿಧಾನಸಭೆಯಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ವಿರುದ್ಧ ಖಂಡನಾ ನಿರ್ಣಯ ಮಂಡಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, "ನಾನು ರಾವತ್ ಅವರನ್ನು ಚೀನಾ ಏಜೆಂಟ್ ಎಂದು ಕರೆಯುತ್ತೇನೆ, ಸಂಜಯ್ ರಾವತ್ ಚೀನಾ ಏಜೆಂಟ್, ಅವರು ದೇಶದ್ರೋಹಿ, ಸಂಜಯ್ ರಾವತ್ ಒಬ್ಬ ದೇಶ ದ್ರೋಹಿ, ಈ ಒಕ್ಕೂಟ ವ್ಯವಸ್ಥೆಯಲ್ಲಿ ಯಾರಾದರೂ ಅಕ್ರಮವಾಗಿ ಬೇರೆ ರಾಜ್ಯಕ್ಕೆ ಪ್ರವೇಶಿಸುತ್ತೇನೆ ಎಂದು ಹೇಳಿದರೆ ಅದು ಒಕ್ಕೂಟ ವ್ಯವಸ್ಥೆ ನಾಶಪಡಿಸುವ ಪ್ರಯತ್ನ" ಎಂದಿದ್ದಾರೆ.

ನೀವು ಚೀನಾದಂತೆ ನಮ್ಮ ರಾಜ್ಯ ಪ್ರವೇಶಿಸಿದರೆ ನಾವು ಭಾರತೀಯ ಸೈನಿಕರಂತೆ ನಿಮ್ಮ ಮೇಲೆ ಪ್ರತಿದಾಳಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು ನೀಡಿದರು.

ಕರ್ನಾಟಕದ ನೆಲ, ಜಲದ ಹಿತ ಕಾಪಾಡಲು ಮತ್ತು ಕಾನೂನಿನ ಹೋರಾಟದ ಸಮರ್ಥನೆ ಮಾಡಲು ಖಂಡನಾ ನಿರ್ಣಯದ ಮೂಲಕ ರಾಜ್ಯ ಸರ್ಕಾರ ತನ್ನ ಬದ್ದತೆಯನ್ನು ಪ್ರದರ್ಶಿಸಿದೆ. ಇತ್ತೀಚೆಗೆ ಈ ವಿಷಯದ ಬಗ್ಗೆ ಮಹಾರಾಷ್ಟ್ರದ ನಾಯಕರು ಕೊಡುತ್ತಿರುವ ಎಲ್ಲ ಹೇಳಿಕೆಗಳು ಅತ್ಯಂತ ಖಂಡನೀಯ ಎಂದರು.

SCROLL FOR NEXT