ದೇಶ

ನಡ್ಡಾ, ಅಮಿತ್ ಶಾ ಭೇಟಿ ಮಾಡಿದ ಹರ್ಯಾಣ ಶಾಸಕ: ಬಿಜೆಪಿ ಸೇರ್ತಾರಾ ಕುಲ್ದೀಪ್ ಬಿಷ್ಣೋಯಿ?

Srinivas Rao BV

ನವದೆಹಲಿ: ಇತ್ತಿಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಹರ್ಯಾಣ ಕಾಂಗ್ರೆಸ್ ಶಾಸಕ ಕುಲ್ದೀಪ್ ಬಿಷ್ಣೋಯ್ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. 

ಕುಲ್ದೀಪ್ ಬಿಷ್ಣೋಯ್ ಅವರ ಈ ಭೇಟಿಯ ಹಿನ್ನೆಲೆಯಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
 
ಅದಮ್ಪುರದ ಶಾಸಕರಾಗಿರುವ ಕುಲ್ದೀಪ್ ಬಿಷ್ಣೋಯ್, ಬಿಜೆಪಿ ನಾಯಕರನ್ನು ಹಾಡಿ ಹೊಗಳಿದ್ದಾರೆ. ಕಾಂಗ್ರೆಸ್ ಇತ್ತೀಚೆಗೆ ಬಿಷ್ಣೋಯ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಉಚ್ಚಾಟಿಸಿತ್ತು.

ಉಚ್ಚಾಟನೆಗೊಂಡ ಬಳಿಕ ಬಿಷ್ಣೋಯ್ ಬಿಜೆಪಿ ಸೇರಲು ಯತ್ನಿಸುತ್ತಿದ್ದು, ಟ್ವಿಟರ್ ಪ್ರೊಫೈಲ್ ನಲ್ಲಿ ತಾವು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಇರುವ ಫೋಟೋವನ್ನು ತೆಗೆದುಹಾಕಿದ್ದಾರೆ. ಅದರ ಬದಲಿಗೆ ತಮ್ಮ ತಂದೆ, ಹರ್ಯಾಣದ ಮಾಜಿ ಸಿಎಂ ದಿವಂಗತ ಭಜನ್ ಲಾಲ್ ಅವರ ಫೋಟೋವನ್ನು ಹಾಕಿದ್ದಾರೆ.

ಇದನ್ನೂ ಓದಿ: ಜೆಪಿ ನಡ್ಡಾ ಭೇಟಿ ಮಾಡಿದ ಆನಂದ್ ಶರ್ಮಾ: ಹಲವು ಊಹಾಪೋಹ
 
ನಾಲ್ಕು ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಷ್ಣೋಯ್ ಗೆ ಕಾಂಗ್ರೆಸ್ ಹೈಕಮಾಂಡ್ ಹರ್ಯಾಣ ಕಾಂಗ್ರೆಸ್ ನ ಮುಖ್ಯಸ್ಥರ ಹುದ್ದೆಗೆ ಪರಿಗಣಿಸದೇ ಇರುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದರು.
 
ಹರ್ಯಾಣ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಗೆ ಮಾಜಿ ಸಿಎಂ ಭೂಪೇಂದರ್ ಸಿಂಗ್ ಹೂಡಾ ಅವರ ಆಪ್ತ ಉದಯ್ ಭಾನ್ ಅವರನ್ನು ನೇಮಕ ಮಾಡಲಾಗಿತ್ತು.

SCROLL FOR NEXT