ದೇಶ

2022 ಗುಜರಾತ್ ಹಿಂಸಾಚಾರ: ಅಹ್ಮದ್ ಪಟೇಲ್ ವಿರುದ್ಧ ಎಸ್‌ಐಟಿ ಆರೋಪಗಳು ಕಪೋಲಕಲ್ಪಿತ, ದುರುದ್ದೇಶದ್ದು- ಕಾಂಗ್ರೆಸ್ ಹೇಳಿಕೆ

Nagaraja AB

ನವದೆಹಲಿ: ಅಹ್ಮದ್ ಪಟೇಲ್ ಅವರು ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಹಣಕಾಸು ಒದಗಿಸಿದ್ದರು ಮತ್ತು ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರವನ್ನು ಪದಚ್ಯುತಗೊಳಿಸಲು ಸಂಚು ರೂಪಿಸಿದ್ದರು ಎಂಬ ಗುಜರಾತ್ ಪೊಲೀಸ್ ಎಸ್‌ಐಟಿಯ ಆರೋಪವನ್ನು ಶನಿವಾರ ತಳ್ಳಿಹಾಕಿರುವ ಕಾಂಗ್ರೆಸ್, ಇದು ಕಪೋಲಕಲ್ಪಿತ, ದುರುದ್ದೇಶದ್ದು ಎಂದು ಹೇಳಿದೆ.

2002ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಉಂಟಾಗಿದ್ದ ಕೋಮು ಹತ್ಯಾಕಾಂಡದ ಯಾವುದೇ ಹೊಣೆಗಾರಿಕೆಯಿಂದ ಪ್ರಧಾನಿ ನರೇಂದ್ರ ಮೋದಿ ಮುಕ್ತಿ ಪಡೆಯುವ ವ್ಯವಸ್ಥಿತ ಕಾರ್ಯತಂತ್ರದ ಭಾಗವಾಗಿದೆ. ಈ ಹತ್ಯಾಕಾಂಡವನ್ನು ನಿಯಂತ್ರಿಸಲು ಅವರ ಇಚ್ಛಾಶಕ್ತಿ ಮತ್ತು ಅಸಮರ್ಥತೆಯೇ ಆಗಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮುಖ್ಯಮಂತ್ರಿಗಳಿಗೆ ತಮ್ಮ ರಾಜಧರ್ಮ ವನ್ನು ನೆನಪಿಸಲು ಕಾರಣವಾಯಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಇದು ಪ್ರಧಾನಿಯವರ ರಾಜಕೀಯ ಸೇಡಿನ ತಂತ್ರವಾಗಿದ್ದು, ಅವರ ರಾಜಕೀಯ ವಿರೋಧಿಗಳಾದವರು ಅಗಲಿದರೂ  ಸಹ ಬಿಡುವುದಿಲ್ಲ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಈ ಎಸ್‌ಐಟಿ ತನ್ನ ರಾಜಕೀಯ ಮಾಸ್ಟರ್ ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಮತ್ತು ಎಲ್ಲಿ ಹೇಳಿದರೂ ಕುಳಿತುಕೊಳ್ಳುತ್ತದೆ. ಹಿಂದಿನ ಎಸ್‌ಐಟಿ ಮುಖ್ಯಸ್ಥರು ಮುಖ್ಯಮಂತ್ರಿಗೆ 'ಕ್ಲೀನ್ ಚಿಟ್' ನೀಡಿದ ನಂತರ ರಾಜತಾಂತ್ರಿಕ ಹುದ್ದೆಯೊಂದಿಗೆ ಹೇಗೆ ಬಹುಮಾನ ಪಡೆದರು ಎಂಬುದು ನಮಗೆ ತಿಳಿದಿದೆ ಎಂದು ಜೈರಾಮ್ ಹೇಳಿದ್ದಾರೆ. 

ಗುಜರಾತ್ ಗಲಭೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲು ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಆರೋಪದಲ್ಲಿ ಮಾಜಿ ಐಪಿಎಸ್ ಅಧಿಕಾರಿಗಳಾದ ಆರ್ ಬಿ ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಅವರೊಂದಿಗೆ ಸೆಟಲ್ವಾಡ್ ಅವರನ್ನು ಬಂಧಿಸಲಾಗಿದೆ. ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಿ, ದಿವಂಗತ ಅಹ್ಮದ್ ಪಟೇಲ್ ಅವರ ಸೂಚನೆಯ ಮೇರೆಗೆ ಈ ಸಂಚು ನಡೆಸಲಾಗಿದೆ ಎಂದು ಎಸ್ ಐಟಿ ಹೇಳಿದೆ.

2002 ರಲ್ಲಿ ಗೋಧ್ರಾ ಗಲಭೆ ನಂತರ ಪಟೇಲ್ ಅವರ ಆದೇಶದ ಮೇರೆಗೆ ಸೆಟಲ್ವಾಡ್ 30 ಲಕ್ಷ ರೂ. ಸ್ವೀಕರಿಸಿದ್ದಾರ ಎಂದು ಆರೋಪಿಸಲಾಗಿದೆ. ಗಲಭೆ ಪ್ರಕರಣದಲ್ಲಿ ಬಿಜೆಪಿ ಸರಕಾರದ ಹಿರಿಯ ನಾಯಕರ ಹೆಸರನ್ನು ಸಿಲುಕಿಸಲು ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರನ್ನು ಸೆಟಲ್ವಾಡ್ ಭೇಟಿಯಾಗುತ್ತಿದ್ದರು ಎಂದು ಎಸ್‌ಐಟಿ ಹೇಳಿದೆ.

2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕಳೆದ ತಿಂಗಳು ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ವಿಧವೆ ಪತ್ನಿ ಜಾಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

SCROLL FOR NEXT