ದೇಶ

ದೆಹಲಿ ಅಬಕಾರಿ ನೀತಿ ಕುರಿತು ಸಿಬಿಐ ತನಿಖೆ: ಸುಳ್ಳು ಪ್ರಕರಣದಲ್ಲಿ ಸಿಸೋಡಿಯಾ ಬಂಧಿಸುವ ಯತ್ನ- ಅರವಿಂದ್ ಕೇಜ್ರಿವಾಲ್ ಕಳವಳ

Srinivasamurthy VN

ನವದೆಹಲಿ: ದೆಹಲಿ ಅಬಕಾರಿ ನೀತಿ ಕುರಿತು ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಈ ಕುರಿತು ಕಳವಳ ವ್ಯಕ್ತಪಡಿಸಿರುವ ದೆಹಲಿ ಸಿಎಂ ಆರವಿಂದ್ ಕೇಜ್ರಿವಾಲ್ ಅವರು, ಸುಳ್ಳು ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಜೈಲಿಗೆ ಕಳುಹಿಸಬಹುದು ಎಂದು ಹೇಳಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಅವರು, 'ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಆಧಾರ ರಹಿತವಾದವು. ಇಡೀ ಪ್ರಕರಣವೇ ಸುಳ್ಳು. ಸಿಸೋಡಿಯಾ ಅವರು 'ಸುಳ್ಳು' ಪ್ರಕರಣದಲ್ಲಿ ಶೀಘ್ರದಲ್ಲೇ ಬಂಧನಕ್ಕೊಳಗಾಗಲಿದ್ದಾರೆ ಎಂಬುದು ಗೊತ್ತಿದೆ ಎಂದು ಆರೋಪಿಸಿದ್ದಾರೆ.

ಅಂತೆಯೇ ಜೈಲುಗಳ ಬಗ್ಗೆ, ಕುಣಿಕೆಯ ಬಗ್ಗೆ ನಮಗೆ ಭಯವಿಲ್ಲ. ನಮ್ಮವರ ವಿರುದ್ಧ ಅವರು ಸಾಕಷ್ಟು ಪ್ರಕರಣಗಳನ್ನು ಸೃಷ್ಟಿಸಲಿದ್ದಾರೆ. ಪಂಜಾಬ್‌ನಲ್ಲಿ ಗೆದ್ದ ಬಳಿಕ ಎಎಪಿ ಬೆಳೆಯುತ್ತಿದೆ. ನಾವು ರಾಷ್ಟ್ರಮಟ್ಟದಲ್ಲಿ ಬೆಳೆಯುವುದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಆದರೆ, ನಮ್ಮನ್ನು ಯಾವುದೂ ತಡೆಯಲಾರದು ಎಂದು ಹೇಳಿದ್ದಾರೆ.

ಅಲ್ಲದೆ ಸಿಸೋಡಿಯಾ ಬೆನ್ನಿಗೆ ನಿಂತ ಕೇಜ್ರಿವಾಲ್, 'ಕಳೆದ 22 ವರ್ಷಗಳಿಂದ ನಾನು ಸಿಸೋಡಿಯಾ ಅವರನ್ನು ಬಲ್ಲೆ. ಅವರು ಪ್ರಾಮಾಣಿಕ. ಅವರು ಸಚಿವರಾದಾಗ ದೆಹಲಿಯ ಸರ್ಕಾರಿ ಶಾಲೆಗಳು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದವು. ಅಂತಹ ಶಾಲೆಗಳನ್ನು ನ್ಯಾಯಾದೀಶರ ಮಕ್ಕಳು ಮತ್ತು ಆಟೋ ರಿಕ್ಷಾ ಚಾಲಕರ ಮಕ್ಕಳು ಒಟ್ಟಿಗೆ ಕೂಡಿ ಓದುವಂತಹ ಸ್ಥಿತಿಗೆ ತರಲು ಸಿಸೋಡಿಯಾ ಹಗಲು ರಾತ್ರಿ ದುಡಿದಿದ್ದಾರೆ' ಎಂದಿದ್ದಾರೆ.

ಹೊಸ ಅಬಕಾರಿ ನೀತಿ 2021–22 ಅನ್ನು ಕಳೆದ ವರ್ಷ ನವೆಂಬರ್‌ 17ರಂದು ಜಾರಿಗೊಳಿಸಲಾಗಿತ್ತು. ಅದರಂತೆ ನಗರದಾದ್ಯಂತ 32 ವಲಯಗಳಲ್ಲಿ 849 ಚಿಲ್ಲರೆ ಮಾರಾಟ ಪರವಾನಗಿ ನೀಡಲಾಗಿದೆ. ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ನಿಯಮ ಉಲ್ಲಂಘನೆ ಹಾಗೂ ಕಾರ್ಯವಿಧಾನದಲ್ಲಿನ ಲೋಪಗಳಿಗೆ ಸಂಬಂಧಿಸಿದಂತೆ ಸರ್ಕಾರದ ಅಬಕಾರಿ ನೀತಿ 2021–22  ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ಇಲಾಖೆಯಲ್ಲಿನ ಭ್ರಷ್ಟಾಚಾರದಲ್ಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಕೇಜ್ರಿವಾಲ್‌ ಪ್ರತಿಕ್ರಿಯೆ ನೀಡಿದ್ದಾರೆ.

SCROLL FOR NEXT