ದೇಶ

ಕಳೆದ ವರ್ಷ 78 ಬಾರಿ ಪೆಟ್ರೋಲ್ ದರ ಹೆಚ್ಚಿಸಲಾಗಿದೆ: ಸಂಸತ್ ಗೆ ಕೇಂದ್ರದ ಉತ್ತರ

Srinivas Rao BV

ನವದೆಹಲಿ: ಕಳೆದ ವರ್ಷ ಪದೇ ಪದೇ ಕೇಂದ್ರ ಸರ್ಕಾರ ತೈಲದರವನ್ನು ಹೆಚ್ಚಿಸುತ್ತಲೇ ಇತ್ತು. ಈ ಬಗ್ಗೆ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಆದರೆ ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರ ಎಷ್ಟು ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದೆ ಗೊತ್ತಾ?.2021-2022ರ ಹಣಕಾಸು ವರ್ಷದಲ್ಲಿ ಪೆಟ್ರೋಲ್ ಬೆಲೆಯನ್ನು 78 ಬಾರಿ ಹೆಚ್ಚಿಸಲಾಗಿದ್ದು, ಡೀಸೆಲ್ ದರವನ್ನು ದೆಹಲಿಯಲ್ಲಿ 76 ಬಾರಿ ಹೆಚ್ಚಿಸಲಾಗಿದೆ ಎಂದು ಸರ್ಕಾರ ಇಂದು ಸಂಸತ್ತಿಗೆ ತಿಳಿಸಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರ ಪ್ರಶ್ನೆಗೆ ಉತ್ತರವಾಗಿ ರಾಜ್ಯಸಭೆಯಲ್ಲಿ ಲಿಖಿತ ಉತ್ತರವನ್ನು ಸಲ್ಲಿಸಿದರು.

ಟ್ವಿಟರ್‌ನಲ್ಲಿ ಉತ್ತರವನ್ನು ಹಂಚಿಕೊಂಡ ರಾಘವ್ ಚಡ್ಡಾ, ಇದು ಸಾಮಾನ್ಯ ಜನರನ್ನು ಲೂಟಿ ಮಾಡುವ ಸರ್ಕಾರದ ಸ್ಪಷ್ಟ ತಪ್ಪೊಪ್ಪಿಗೆಯಾಗಿದೆ ಎಂದು ಹೇಳಿದರು.

“ರಾಜ್ಯಸಭೆಯಲ್ಲಿ ನನ್ನ ಪ್ರಶ್ನೆಗೆ ಉತ್ತರವಾಗಿ, ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ 78 ಬಾರಿ ಮತ್ತು 76 ಬಾರಿ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಇದು ಸಾಮಾನ್ಯ ಜನರನ್ನು ಲೂಟಿ ಮಾಡುತ್ತಿರುವ ಸರ್ಕಾರದ ಸ್ಪಷ್ಟವಾದ ತಪ್ಪೊಪ್ಪಿಗೆಯಾಗಿದೆ ಎಂದು ರಾಘವ್ ಚಡ್ಡಾ ಹೇಳಿದರು.

ಕಳೆದ ವಾರ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಪ್ರತಿಪಕ್ಷಗಳು ಹಣದುಬ್ಬರ ಮತ್ತು ಬೆಲೆ ಏರಿಕೆ ಕುರಿತು ಚರ್ಚೆಗೆ ಒತ್ತಾಯಿಸುತ್ತಿವೆ.

SCROLL FOR NEXT