ದೇಶ

ಉತ್ತರ ಪ್ರದೇಶದಲ್ಲಿ ಹಿಂಸಾಚಾರ: ಇಲ್ಲಿಯವರೆಗೆ 304 ಪ್ರತಿಭಟನಾಕಾರರ ಬಂಧನ

Nagaraja AB

ಲಖನೌ: ಪ್ರವಾದಿ ಮೊಹಮ್ಮದ್ ಪೈಗಂಬರ ಕುರಿತ ವಿವಾದಾತ್ಮಾಕ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರ ಬಂಧನಕ್ಕೆ ಒತ್ತಾಯಿಸಿ ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪ್ರಕರಣಕ್ಕೆ  ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಇಲ್ಲಿಯವರೆಗೂ 8 ಜಿಲ್ಲೆಗಳ ಸುಮಾರು 304 ಜನರನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಎಂಟು ಜಿಲ್ಲೆಗಳ 304 ಜನರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜಿಲ್ಲೆಗಳಲ್ಲಿ 13 ಪ್ರಕರಣಗಳು ದಾಖಲಾಗಿವೆ ಎಂದು ಎಡಿಜಿಪಿ ಪ್ರಶಾಂತ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಯಾಗ್ ರಾಜ್ ನಲ್ಲಿ 91 ಜನರು, ಶಹರನ್ ಪುರದಲ್ಲಿ 71, ಹರ್ತಾಸ್ ನಲ್ಲಿ 51, ಅಂಬೇಡ್ಕರ್ ನಗರ ಹಾಗೂ ಮೊರಾದಾಬಾದ್ ನಲ್ಲಿ ತಲಾ 34, ಫಿರೋಜಾಬಾದ್ ನಲ್ಲಿ 15. ಅಲಿಘಡದಲ್ಲಿ 6 ಮತ್ತು ಜಲೌನ್ ನಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪ್ರಯಾಗ್ ರಾಗ್ ಹಾಗೂ ಶಹರನ್ ಪುರದಲ್ಲಿ ಮೂರು, ಫಿರೋಜಾಬಾದ್, ಅಂಬೇಡ್ಕರ್ ನಗರ, ಮೊರಾದಾಬಾದ್, ಹರ್ತಾಸ್, ಅಲಿಘಡ, ಲಖಿಂಪುರ, ಜಲೌನ್ ನಲ್ಲಿ ತಲಾ ಒಂದೊಂದು ಕೇಸ್ ಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ  ಪ್ರಯಾಗ್ ರಾಜ್ ಹಾಗೂ ಶಹರನ್ ಪುರದಲ್ಲಿ ಮುಸ್ಲಿಂರು ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದು, ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು.

SCROLL FOR NEXT