ದೇಶ

ಮಹಾರಾಷ್ಟ್ರ ಬಿಕ್ಕಟ್ಟು: ದ್ರೋಹಿಗಳು ಗೆಲ್ಲುವುದಿಲ್ಲ; ಶಿಂಧೆ ಬಣಕ್ಕೆ ಆದಿತ್ಯ ಠಾಕ್ರೆ ಟಾಂಗ್

Vishwanath S

ಮುಂಬೈ: ಮಹಾರಾಷ್ಟ್ರ ಸರ್ಕಾರದಲ್ಲಿ ರಾಜಕೀಯ ಬಿಕ್ಕಟ್ಟು ಜೋರಾಗ್ತಿದ್ದು ಏಟು ಎದಿರೇಟು ಮುಂದುವರೆದಿದೆ. ಸತತ ಮೂರನೇ ದಿನವೂ ಸಿಎಂ ಪುತ್ರ, ಸಚಿವ ಆದಿತ್ಯ ಠಾಕ್ರೆ ರೆಬೆಲ್ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು ಅವರು ದೇಶದ್ರೋಹಿಗಳು, ಬಂಡುಕೋರರಲ್ಲ ಎಂದಿದ್ದಾರೆ.

ರಾಜಕೀಯ ಹೋರಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವಾಗಲೇ ಆದಿತ್ಯ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. ಶಿಂಧೆ ಪಾಳಯವನ್ನು ದೇಶದ್ರೋಹಿಗಳು, ಬಂಡುಕೋರರಲ್ಲ ಎಂದು ಕರೆದ ಅವರು,  ದ್ರೋಹ ಮಾಡುವವರು ಎಂದಿಗೂ ಗೆಲ್ಲುವುದಿಲ್ಲ. ನಮಗೆ ವಿಶ್ವಾಸವಿದೆ. ನಮಗೆ ಬಹಳಷ್ಟು ಪ್ರೀತಿ ಸಿಗುತ್ತಿದೆ ಎಂದು ಹೇಳಿದರು.

ಆದಿತ್ಯ ಠಾಕ್ರೆ ಅವರು ಸುಪ್ರೀಂ ಕೋರ್ಟ್‌ನಲ್ಲಿನ ಪ್ರಕ್ರಿಯೆಗಳ ಬಗ್ಗೆ ನೇರವಾಗಿ ಪ್ರತಿಕ್ರಿಯಿಸದಿದ್ರೂ, ವಿಶ್ವಾಸಮತವನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.   ಅವರು  ನನ್ನ ಮುಂದೆ ಕುಳಿತು, ನನ್ನ ಕಣ್ಣಲ್ಲಿ ಕಣ್ಣಿಟ್ಟು ನಾವು ಏನು ತಪ್ಪು ಮಾಡಿದೆವು ಎಂದು ಹೇಳಿದಾಗ ಎರಡನೇ ವಿಶ್ಪಾಸ ಪರೀಕ್ಷೆ ಇರುತ್ತದೆ ಎಂದರು. ಇಲ್ಲಿಂದ ಓಡಿಹೋದವರನ್ನ ಬಂಡಾಯಗಾರರು ಎನ್ನಲಾಗ್ತಿದೆ. ನಿಜಕ್ಕೂ ಅವರು ಬಂಡಾಯಗಾರರಾಗಿದ್ದರೆ ಇಲ್ಲೇ ಬಂಡಾಯವೇಳಬೇಕಿತ್ತು. ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಬೇಕಿತ್ತು ಎಂದು ಅವರು ಹೇಳಿದರು.

ಸಚಿವ ಉದಯ್ ಸಾಮಂತ್ ಅವರು ಗುವಾಹಟಿಯಲ್ಲಿ ಶಿಂಧೆ ಶಿಬಿರಕ್ಕೆ ಸೇಗಿದ ಬಗ್ಗೆ ನಿರ್ದಿಷ್ಟವಾಗಿ ಕೇಳಿದಾಗ ಇದು ಅವರ ನಿರ್ಧಾರ, ಆದರೆ ಅವರು ನಮ್ಮ ಮುಂದೆ ಬರುತ್ತಾರೆ. ಅವರು ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಎಂದು ಹೇಳಿದರು.

ಠಾಕ್ರೆ ತಂಡದ ನಿಷ್ಠಾವಂತ ಸಂಜಯ್ ರಾವತ್ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ(ಇಡಿ) ಸಮನ್ಸ್ ಪಡೆದಿರುವ ಬಗ್ಗೆಯೂ ಪ್ರತಿಕ್ರಿಯಿಸಿ ಇದು ರಾಜಕೀಯವಲ್ಲ, ಈಗ ಇದೊಂದು ಸರ್ಕಸ್ ಆಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಜೊತೆಗಿನ ಶಿವಸೇನೆಯ ಮೈತ್ರಿಯನ್ನು ಏಕನಾಥ್ ಶಿಂಧೆ ಅವರ ಗುಂಪು ಅಸ್ವಾಭಾವಿಕ ಎಂದು ಬಣ್ಣಿಸಿದೆ. ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಈ ಗುಂಪು, ಪಕ್ಷವು ಹಂಚಿಕೊಂಡ ಹಿಂದುತ್ವ ಸಿದ್ಧಾಂತದ ಮೇಲೆ ಬಿಜೆಪಿಯೊಂದಿಗೆ ತನ್ನ ಮೈತ್ರಿಯನ್ನು ಪುನಃಸ್ಥಾಪಿಸಲು ಬಯಸುತ್ತಿದೆ. ಠಾಕ್ರೆ ಬಣದ ಸಿದ್ಧಾಂತದ ಪ್ರತಿಪಾದನೆಯನ್ನು ತಳ್ಳಿಹಾಕಿದ್ದು ದಂಗೆಯನ್ನು ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಸ್ಕ್ರಿಪ್ಟ್ ಎಂದಿದೆ.

SCROLL FOR NEXT