ದೇಶ

ಮುಂಬೈ: ಕುರ್ಲಾದಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; ಮೃತರ ಸಂಖ್ಯೆ 19ಕ್ಕೆ ಏರಿಕೆ, ಎಫ್ಐಆರ್ ದಾಖಲು

Manjula VN

ಮುಂಬೈ: ವಾಣಿಜ್ಯ ನಗರಿ ಮುಂಬೈನ ಕುರ್ಲ ಪ್ರದೇಶದ ನಾಲ್ಕು ಅಂತಸ್ತಿನ ಕಟ್ಟಡ ಕುಸಿತಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ಬುಧವಾರ ತಿಳಿದುಬಂದಿದೆ. 

ಕುರ್ಲಾದ ನಾಯಕ್ ನಗರ ಸೊಸೈಟಿಯಲ್ಲಿರುವ ವಸತಿ ಕಟ್ಟಡದ ಒಂದು ಭಾಗ ಸೋಮವಾರ ಮಧ್ಯರಾತ್ರಿ ಕುಸಿದು ಬಿದ್ದಿತ್ತು. ಘಟನೆ ಸಂಬಂಧ ಇದೀಗ ಮೃತರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಗಾಯಗೊಂಡಿರುವ 15 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈ ನಡುವೆ ಘಟನೆ ಸಂಬಂಧ ಕಟ್ಟಡದ ಮಾಲೀಕ ಹಾಗೂ ದಿಲೀಕ್ ಬಿಸ್ವಾಸ್ ಎಂಬುವವರ ವಿರುದ್ಧ ಮುಂಬೈ ಪೊಲೀಸರು ಐಪಿಸಿ ಸೆಕ್ಷನ್ 302 (2), 308, 337 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ಸಂಬಂಧ ನಿನ್ನೆಯಷ್ಟೇ ತೀವ್ರ ಸಂತಾಪ ಸೂಚಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ ರೂ.2 ಲಕ್ಷ ಹಾಗೂ ಗಾಯಾಳುಗಳಿಗೆ ರೂ.50 ಸಾವಿರ ನೀಡುವುದಾಗಿ ತಿಳಿಸಿದ್ದರು. 

ಇದರಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಮೃತರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ಘೋಷಿಸಿದ್ದರು.

SCROLL FOR NEXT