ದೇಶ

ಉದಯಪುರದಲ್ಲಿ ರೈಲ್ವೆ ಹಳಿ ಸ್ಫೋಟ; ಎನ್ಐಎ, ಇತರ ಸಂಸ್ಥೆಗಳಿಂದ ತನಿಖೆ ಆರಂಭ

Lingaraj Badiger

ಉದಯಪುರ: ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ ರಾಜಸ್ಥಾನದ   ಉದಯ್‌ಪುರ-ಅಹಮದಾಬಾದ್‌ ರೈಲು ಹಳಿಯನ್ನು ಭಾನುವಾರ ದುಷ್ಕರ್ಮಿಗಳು ಸ್ಫೋಟಿಸಿದ್ದಾರೆ.

ಅಸರ್ವಾ-ಉದಯಪುರ್ ಎಕ್ಸ್‌ಪ್ರೆಸ್ ರೈಲು ಹಾದುಹೋಗುವ ಕೆಲವೇ ಗಂಟೆಗಳ ಮೊದಲು ಹಳಿ ಸ್ಫೋಟಗೊಂಡಿದ್ದು, ರೈಲನ್ನು ಡುಂಗರ್ ಪುರದಲ್ಲಿ ತಡೆದು ನಿಲ್ಲಿಸಲಾಗಿದೆ. ಇದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಉದಯಪುರದ ಜವಾರ್ ಮೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೆವ್ಡಾ ಕಿ ನಾಲ್ ಬಳಿಯ ಓಡಾ ಸೇತುವೆಯಲ್ಲಿ ಹಳಿ ಸ್ಫೋಟಕ್ಕೆ ಗಣಿ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಸ್ಥಳೀಯ ಜನ ಇಂದು ಬೆಳಗ್ಗೆ ಸ್ಫೋಟದ ಬಗ್ಗೆ ನಮಗೆ ಮಾಹಿತಿ ನೀಡಿದರು. ನಾವು ಟ್ರ್ಯಾಕ್‌ನಲ್ಲಿ ಕೆಲವು ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದೇವೆ ಮತ್ತು ದುಷ್ಕರ್ಮಿಗಳನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ. ವಿಧ್ವಂಸಕ ಕೃತ್ಯ ಸೇರಿದಂತೆ ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ" ಎಂದು ಸ್ಟೇಷನ್ ಹೌಸ್ ಆಫೀಸರ್(ಎಸ್‌ಎಚ್‌ಒ) ಅನಿಲ್ ಕುಮಾರ್ ವಿಷ್ಣೋಯ್ ಅವರು ತಿಳಿಸಿದ್ದಾರೆ.

SCROLL FOR NEXT