ದೇಶ

ಬಾಲಿವುಡ್ ನಟ ಅನ್ನು ಕಪೂರ್ ಗೆ 4.36 ಲಕ್ಷ ರೂ. ವಂಚನೆ: 28 ವರ್ಷದ ಸೈಬರ್ ವಂಚಕ ಬಂಧನ

Nagaraja AB

ಮುಂಬೈ: ಕೆವೈಸಿ ವಿವರಗಳನ್ನು ಪ್ರಮುಖ ಬ್ಯಾಂಕಿನೊಂದಿಗೆ ನವೀಕರಿಸುವ ನೆಪದಲ್ಲಿ ಬಾಲಿವುಡ್ ಅನ್ನು ಕಪೂರ್ ಗೆ ಕರೆ ಮಾಡಿ 4.36 ಲಕ್ಷ ರೂ. ವಂಚಿಸಿದ್ದ 24 ವರ್ಷದ ಸೈಬರ್ ವಂಚಕನನ್ನು ಘಟನೆ ನಡೆದ ಎರಡು ತಿಂಗಳ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆರೋಪಿ ಆಶಿಶ್ ಪಾಸ್ವಾನ್ ನನ್ನು ಸೋಮವಾರ ಉಪನಗರ ಅಂಧೇರಿಯಲ್ಲಿ ಬಂಧಿಸಲಾಗಿದೆ. ಈತ ಬಿಹಾರದ ದರ್ಭಾಂಗ ಮೂಲದವನು ಎನ್ನಲಾಗಿದೆ. ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದ ಜನರಿಗೆ ಸಹಾಯ ಮಾಡುವ ಮೂಲಕ ಪಾಸ್ವಾನ್ ಕಮಿಷನ್ ಗಳಿಸುತ್ತಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶೇಷ ತಂಡವು ತಾಂತ್ರಿಕ ಸಾಕ್ಷ್ಯಗಳು, ಆತನ ಮೊಬೈಲ್ ಫೋನ್ ಸಂಖ್ಯೆ ಮತ್ತು ಆನ್‌ಲೈನ್ ವಹಿವಾಟಿನ ವಿವರಗಳ ಮೂಲಕ ಪಾಸ್ವಾನ್‌ನನ್ನು ಗುರುತಿಸಿದೆ. ಕಪೂರ್ ಖಾತೆ ಹೊಂದಿರುವ ಖಾಸಗಿ ಬ್ಯಾಂಕ್‌ನಲ್ಲಿ ತನ್ನ ಖಾತೆಯನ್ನು ತೆರೆಯುವಾಗ ಆರೋಪಿ ಸಲ್ಲಿಸಿದ ಫೋಟೋ ಸಹ ಹೊಂದಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸರು ಪಾಸ್ವಾನ್‌ನಿಂದ ಕೆಲವು ದಾಖಲೆಗಳು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಖಾಸಗಿ ಬ್ಯಾಂಕ್‌ನ ಮುಖ್ಯ ಶಾಖೆಯಲ್ಲಿ ಕಾರ್ಯನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಸೆಪ್ಟೆಂಬರ್‌ನಲ್ಲಿ ಕಪೂರ್‌ಗೆ ಕರೆ ಮಾಡಿದ್ದ ಪಾಸ್ವಾನ್, ನಿಮ್ಮ  ವಿವರಗಳನ್ನು ಬ್ಯಾಂಕ್‌ನ ದಾಖಲೆಯಲ್ಲಿ ನವೀಕರಿಸಲಾಗಿಲ್ಲ, ತಕ್ಷಣ ಕ್ರಮ ತೆಗೆದುಕೊಳ್ಳದಿದ್ದರೆ ಖಾತೆಯನ್ನು ಅಮಾನತುಗೊಳಿಸಲಾಗುವುದು ಎಂದು ಹೇಳಿದ್ದ.

ಕೆವೈಸಿ ಪ್ರಕ್ರಿಯೆ  ಪೂರ್ಣಗೊಳಿಸುವ ನೆಪದಲ್ಲಿ ವಂಚಕ  ನಟನ ಬ್ಯಾಂಕಿಂಗ್ ವಿವರಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಒನ್-ಟೈಮ್ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳಲು ಹೇಳಿದ್ದ ಎಂದು ಎಫ್ ಐಆರ್ ನಲ್ಲಿ ಹೇಳಲಾಗಿದೆ. 

SCROLL FOR NEXT