ದೇಶ

ಡ್ರಗ್ಸ್ ಇದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ ಎಫ್ ಮಹಿಳಾ ಪಡೆ

Lingaraj Badiger

ಅಮೃತಸರ: ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ 3.1 ಕೆಜಿ ಮಾದಕವಸ್ತುಗಳೊಂದಿಗೆ ಭಾರತದ ಗಡಿ ಪ್ರವೇಶಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ಮಹಿಳಾ ಪಡೆ ಹೊಡೆದುರುಳಿಸಿದೆ. ಈ ಮೂಲಕ ಗಡಿಯಾಚೆಗಿನ ಡ್ರಗ್ಸ್ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ರಾತ್ರಿ ಅಮೃತಸರ ನಗರದ ಉತ್ತರಕ್ಕೆ 40 ಕಿಮೀ ದೂರದಲ್ಲಿರುವ ಚಹರ್‌ಪುರ ಗ್ರಾಮದ ಬಳಿ ಪಾಕ್ ಡ್ರೋನ್ ಭಾರತದ ಭೂಪ್ರದೇಶ ಪ್ರವೇಶಿಸುತ್ತಿರುವುದನ್ನು ಗಮನಿಸಿದ ಬಿಎಸ್ಎಫ್ ಮಹಿಳಾ ಸಿಬ್ಬಂದಿ ಅದರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್ಎಫ್ ನ 73 ಬೆಟಾಲಿಯನ್‌ನ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಡ್ರೋನ್‌ ಮೇಲೆ 25 ಸುತ್ತು ಗುಂಡು ಹಾರಿಸಿ ರಾತ್ರಿ 11.05 ಕ್ಕೆ ಹೊಡೆದುರುಳಿಸಿದರು. ಶೋಧ ಕಾರ್ಯಾಚರಣೆಯ ಸಮಯದಲ್ಲಿ ಬಿಎಸ್ಎಫ್ ಭಾಗಶಃ ಹಾನಿಗೊಳಗಾದ ಹೆಕ್ಸಾಕಾಪ್ಟರ್ ಅನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

"ಸದಾ ಎಚ್ಚರ ವಹಿಸುವ ಬಿಎಸ್ಎಫ್ ಪಡೆಗಳು ಮತ್ತೊಮ್ಮೆ ಡ್ರೋನ್ ಅನ್ನು ಸೆರೆಹಿಡಿಯುವ ಮೂಲಕ ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಿವೆ. ಡ್ರೋನ್ ಅನ್ನು ಮಹಿಳಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ" ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

SCROLL FOR NEXT