ಅಹಮದಾಬಾದ್: ಭಾರತೀಯ ಜನತಾ ಪಕ್ಷದಂತೆ ತಮ್ಮ ಪಕ್ಷದಲ್ಲಿ "ರಿಮೋಟ್ ಕಂಟ್ರೋಲ್" ಎಂಬುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಚುನಾವಣಾ ಪ್ರಚಾರಕ್ಕಾಗಿ ಅಹಮದಾಬಾದ್ ಆಗಮಿಸಿರುವ ಖರ್ಗೆ ಅವರು, ಅತ್ಯಂತ ಹಳೆಯ ಪಕ್ಷದ ಮುಖ್ಯಸ್ಥರಾದರೆ ರಿಮೋಟ್ ಕಂಟ್ರೋಲ್ ತಮ್ಮ ಬಳಿಯೇ ಇರುತ್ತದೆ ಎಂದು ಪ್ರತಿಪಾದಿಸಿದರು.
ತಾವು ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ನಂತರ ಸೋನಿಯಾ ಗಾಂಧಿಯವರ "ರಿಮೋಟ್ ಕಂಟ್ರೋಲ್" ಆಗಿರುತ್ತಾರೆ ಮತ್ತು ಅವರು ಹೇಳಿದಂತೆ ಕಾರ್ಯನಿರ್ವಹಿಸುತ್ತಾರೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಬಿಜೆಪಿಯ ರಿಮೋಟ್ ಕಂಟ್ರೋಲ್ ಎಲ್ಲಿದೆ? ಎಂದು ಪ್ರಶ್ನಿಸಿದರು.
"ಹಲವು ಜನ ನಾನು ರಿಮೋಟ್ ಕಂಟ್ರೋಲ್ ಆಗಿದ್ದು, ಸೋನಿಯಾ ಗಾಂಧಿ ಏನು ಹೇಳುತ್ತಾರೋ ಅದನ್ನು ಮಾಡುತ್ತೇನೆ ಎಂದು ಅವರು ಹೇಳುತ್ತಾರೆ. ಆದರೆ ಕಾಂಗ್ರೆಸ್‌ನಲ್ಲಿ ರಿಮೋಟ್ ಕಂಟ್ರೋಲ್ ಎಂಬುದೇನೂ ಇಲ್ಲ, ಜನರು ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, "ಪ್ರಧಾನಿ ಮೋದಿ ಎಷ್ಟು ಬಾರಿ(ಬಿಜೆಪಿ ಅಧ್ಯಕ್ಷರ ಹುದ್ದೆಗೆ) ಚುನಾವಣೆ ನಡೆಸಿದ್ದಾರೆ? ನೀವು ಎಲ್ಲಾ ಅಧ್ಯಕ್ಷರನ್ನು ಒಮ್ಮತದ ಮೂಲಕ ಆಯ್ಕೆ ಮಾಡಿದ್ದೀರಿ, ನಿಮ್ಮಿಂದ ನಾನು ಪಾಠ ಕಲಿಯಬೇಕಾ? ಬಿಜೆಪಿಯ ರಿಮೋಟ್ ಕಂಟ್ರೋಲ್ ಎಲ್ಲಿದೆ? ನಾನು ಅಧ್ಯಕ್ಷರಾದರೆ, ರಿಮೋಟ್ ಕಂಟ್ರೋಲ್ ನನ್ನೊಂದಿಗೆ ಇರುತ್ತದೆ" ಎಂದರು.
"ನಮ್ಮ ಪಕ್ಷದಲ್ಲಿ ಸಮಿತಿ, ಚುನಾಯಿತ ಸದಸ್ಯರು, ಕಾರ್ಯಕಾರಿ ಸಮಿತಿ ಮತ್ತು ಸಂಸದೀಯ ಮಂಡಳಿ" ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಶೇ. 50 ರಷ್ಟು ಸಾಂಸ್ಥಿಕ ಹುದ್ದೆಗಳನ್ನು ಕಾಯ್ದಿರಿಸಲು ನಾನು ಪ್ರಯತ್ನಿಸುತ್ತೇನೆ ಎಂದು ಖರ್ಗೆ ಹೇಳಿದರು.