ದೇಶ

ಆಂಧ್ರಪ್ರದೇಶದ ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ, ಇಬ್ಬರು ಸಜೀವ ದಹನ; ಮೂರು ಅಂಗಡಿಗಳು ನಾಶ

Ramyashree GN

ಅಮರಾವತಿ: ವಿಜಯವಾಡದ ಪಟಾಕಿ ಅಂಗಡಿಯೊಂದರಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ವ್ಯಕ್ತಿಗಳು ಸಜೀವ ದಹನಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿಯಲ್ಲಿ ಸುಟ್ಟು ಕರಕಲಾದ ಮೂರು ಅಂಗಡಿಗಳ ಪೈಕಿ ಒಂದರಲ್ಲಿ ಕಾರ್ಮಿಕರು ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿಯಿಂದಾಗಿ ಮೂರು ಪಟಾಕಿ ಅಂಗಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಆದರೆ, ಅಗ್ನಿಶಾಮಕ ದರ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದಾಗಿ ಬೆಂಕಿಯು ಇತರ ಅಂಗಡಿಗಳಿಗೆ ವ್ಯಾಪಿಸದಂತೆ ತಡೆದಿದೆ.

ಬೆಂಕಿಯಿಂದ ಉಂಟಾದ ಸ್ಫೋಟದ ಶಬ್ದದಿಂದ ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುತ್ತಿದ್ದ ಜನರು ನಿದ್ರೆಯಿಂದ ಹೊರಬಂದರು.

ದೀಪಾವಳಿ ಹಬ್ಬಕ್ಕಾಗಿ ಪಟಾಕಿ ಅಂಗಡಿಗಳನ್ನು ಸ್ಥಾಪಿಸಿರುವ ಮೈದಾನದ ಎದುರು ಇಂಧನ ಕೇಂದ್ರವಿದೆ. ಆದರೆ, ಅದೃಷ್ಟವಶಾತ್ ಬೆಂಕಿ ಹರಡಲಿಲ್ಲ. ಏಕೆಂದರೆ ಕನಿಷ್ಠ ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಧಾವಿಸಿವೆ.

ಬೆಂಕಿ ಏಕೆ ಹೊತ್ತುಕೊಂಡಿತು ಎನ್ನುವ ಬಗ್ಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಇನ್ನೂ ಪತ್ತೆ ಮಾಡಿಲ್ಲ.

ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಮಲ್ಲಾಡಿ ವಿಷ್ಣು, ನಗರ ಪೊಲೀಸ್ ಆಯುಕ್ತ ಕೆ.ಆರ್. ಟಾಟಾ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಪಟಾಕಿ ಅಂಗಡಿಯ ಎದುರುಗಡೆಯೇ ಇಂಧನ ಕೇಂದ್ರವಿದ್ದು, ಮೈದಾನದಲ್ಲಿ ಪಟಾಕಿ ಅಂಗಡಿಗಳನ್ನು ಸ್ಥಾಪಿಸಲು ಅನುಮತಿ ನೀಡಿರುವುದರ ವಿರುದ್ಧ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

'ಕಿಡಿಗಳು ಪೆಟ್ರೋಲ್ ಪಂಪ್‌ಗೆ ಹಾರಿಹೋಗಿದ್ದರೆ ಏನಾಗುತ್ತಿತ್ತು?' ಎಂದು ಆಕ್ರೋಶಗೊಂಡ ನಿವಾಸಿಗಳು ಅಧಿಕಾರಿಗಳನ್ನು ಪ್ರಶ್ನಿಸಿದರು.

SCROLL FOR NEXT