ದೇಶ

ಐಎನ್ಎಸ್ ವಿಕ್ರಾಂತ್ ಎಲ್ಲಾ ಸರ್ಕಾರಗಳ ಸಂಘಟಿತ ಪ್ರಯತ್ನದ ಫಲ; ಇದನ್ನು ಮೋದಿ ಒಪ್ಪಿಕೊಳ್ಳುತ್ತಾರೆಯೇ?: ಕಾಂಗ್ರೆಸ್

Lingaraj Badiger

ನವದೆಹಲಿ: ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಕಾರ್ಯಾರಂಭದ ಕ್ರೆಡಿಟ್ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಹಿಂದಿನ ಸರ್ಕಾರಗಳು ನೀಡಿದ ಕೊಡುಗೆ ಗುರುತಿಸದಿರುವುದು "ಬೂಟಾಟಿಕೆ" ಎಂದು ಟೀಕಿಸಿದೆ.

2013ರ ಆಗಸ್ಟ್‌ನಲ್ಲಿ ಮಾಜಿ ರಕ್ಷಣಾ ಸಚಿವ ಎ ಕೆ ಆಂಟನಿ ಅವರು ಐಎನ್‌ಎಸ್ ವಿಕ್ರಾಂತ್ ಯೋಜನೆಗೆ ಚಾಲನೆ ನೀಡುವ ವಿಡಿಯೋ ಹಂಚಿಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಈ ವಿಮಾನವಾಹಕ ನೌಕೆ ಕಾರ್ಯಾರಂಭ ಮಾಡುವ ಸಂದರ್ಭದಲ್ಲಿ ಮೋದಿ ಸರ್ಕಾರ ಅಧಿಕಾರದಲ್ಲಿದೆ ಅಷ್ಟೇ ಎಂದು ಹೇಳಿದ್ದಾರೆ.

"ಮೋದಿ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಮೋದಿ ಸರ್ಕಾರ ಐಎನ್ಎಸ್ ಕಾರ್ಯಾರಂಭ ಮಾಡುವಾಗ ಅಧಿಕಾರದಲ್ಲಿದೆ ಅಷ್ಟೇ. ವಾಸ್ತವವಾಗಿ, INS ವಿಕ್ರಾಂತ್ ಅನ್ನು ವರ್ಷಗಳ ಹಿಂದೆ ಎ ಕೆ ಆಂಟನಿ ಅವರು ರಕ್ಷಣಾ ಸಚಿವರಾಗಿದ್ದಾಗ ಪ್ರಾರಂಭಿಸಿದ್ದರು. ಅದರ ವಿನ್ಯಾಸ, ತಯಾರಿಕೆ, ಪರೀಕ್ಷೆ, ಆರಂಭಕ್ಕೆ 22 ವರ್ಷಗಳನ್ನು ತೆಗೆದುಕೊಂಡಿದ್ದು, ಅಂತಿಮವಾಗಿ ಇಂದು ಕಾರ್ಯಾರಂಭ ಮಾಡಿದೆ. ಮೋದಿ ಸರ್ಕಾರ ಮಾಡಿರುವುದು ಹಡಗಿನ ಕಾರ್ಯಾರಂಭ ಅಷ್ಟೇ. ಆದರೆ ಅದರ ಸಂಪೂರ್ಣ ಕ್ರೆಡಿಟ್ ಅನ್ನು ಅವರು ತೆಗೆದುಕೊಳ್ಳುತ್ತಿದ್ದಾರೆ ಎಂದು ರಮೇಶ್ ಪಿಟಿಐಗೆ ತಿಳಿಸಿದ್ದಾರೆ.

"ಇದು ಬೂಟಾಟಿಕೆಯಾಗಿದೆ, ಇದು ಪ್ರಸ್ತುತ ಪ್ರಧಾನಿಯ ವೈಶಿಷ್ಟೆ" ಎಂದು ಕಾಂಗ್ರೆಸ್ ನಾಯಕ ಮೋದಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಿಜಕ್ಕೂ ಇದರ ಕೀರ್ತಿ ಹಿಂದಿನ ಸರ್ಕಾರಗಳಿಗೆ, ಭಾರತೀಯ ನೌಕಾಪಡೆ ಮತ್ತು ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ಹಡಗುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್ ಇಂದು ಕಾರ್ಯಾರಂಭ ಮಾಡಿದ್ದು, 1999 ರಿಂದ ಎಲ್ಲಾ ಸರ್ಕಾರಗಳ ಸಂಘಟಿತ ಪ್ರಯತ್ನದ ಫಲವಾಗಿದೆ. ಪ್ರಧಾನಿ ಮೋದಿ ಇದನ್ನು ಒಪ್ಪಿಕೊಳ್ಳುವರೇ?" ಎಂದು ಜೈರಾಮ್ ರಮೇಶ್ ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

SCROLL FOR NEXT