ದೇಶ

ಪ್ರಾಂಶುಪಾಲರ ಮೇಲೆ 3 ಬಾರಿ ಗುಂಡು ಹಾರಿಸಿದ 12ನೇ ತರಗತಿ ವಿದ್ಯಾರ್ಥಿ!

Srinivasamurthy VN

ಲಖನೌ: ಉತ್ತರ ಪ್ರದೇಶದ ಸೀತಾಪುರದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತನ್ನ ಶಾಲಾ ಪ್ರಾಂಶುಪಾಲರ ಮೇಲೆ ದೇಶೀ ನಿರ್ಮಿತ ಪಿಸ್ತೂಲ್‌ನಿಂದ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಶನಿವಾರ ನಡೆದಿದೆ. 

ಸೀತಾಪುರದ ಜಹಾಂಗೀರಾಬಾದ್ ಪಟ್ಟಣದ ಆದರ್ಶ್ ರಾಮ್ ಸ್ವರೂಪ್ ಇಂಟರ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, 12ನೇ ತರಗತಿಯ ಬಾಲಕ ರೇವಾನ್ ಗ್ರಾಮದ ನಿವಾಸಿ ಗುರ್ವಿಂದರ್ ಸಿಂಗ್ ಮತ್ತೊಬ್ಬ ವಿದ್ಯಾರ್ಥಿ ರೋಹಿತ್ ಮೌರ್ಯ ಎಂಬಾತನೊಂದಿಗೆ ಜಗಳವಾಡಿದ್ದ. ಬಳಿಕ ಪ್ರಾಂಶುಪಾಲ ರಾಮ್ ಸಿಂಗ್ ವರ್ಮಾ ಅವರು ಆತನನ್ನು ನಿಂದಿಸಿದ್ದರು. ಇದರಿಂದ ಮನನೊಂದಿದ್ದ ಎನ್ನಲಾಗಿದೆ. ಆರೋಪಿ ವಿದ್ಯಾರ್ಥಿ ಪ್ರಾಂಶುಪಾಲರ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಬಂದೂಕಿನೊಂದಿಗೆ ಪರಾರಿಯಾಗಿದ್ದಾನೆ. 

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಂಗಗಳಿಗೆ ಗಂಭೀರವಾದ ಏಟು ಬಿದ್ದಿದ್ದು ಪ್ರಾಂಶುಪಾಲರು ಗಾಯಗೊಂಡಿದ್ದಾರೆ. ಪ್ರಸ್ತುತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ದೀಕ್ಷಿತ್ ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಪ್ರಾಂಶುಪಾಲರನ್ನು ಲಖನೌಗೆ ರವಾನಿಸಲಾಗಿದೆ.

ವಿದ್ಯಾರ್ಥಿಗಳಿಬ್ಬರ ನಡುವೆ ಶುಕ್ರವಾರ ನಡೆದ ಜಗಳದ ಕುರಿತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಸ್ತುತ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಠಾಣಾಧಿಕಾರಿ ಪ್ರದೀಪ್ ಸಿಂಗ್ ತಿಳಿಸಿದ್ದಾರೆ.

ಇಡೀ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿದ್ಯಾರ್ಥಿಯು ಕೈಯಲ್ಲಿ ಗನ್ ಹಿಡಿದು ಪ್ರಾಂಶುಪಾಲರನ್ನು ಹಿಂಬಾಲಿಸುತ್ತಿರುವುದನ್ನು ತೋರಿಸುತ್ತದೆ.  ಆದರೆ ಕೆಲವೇ ಕ್ಷಣಗಳಲ್ಲಿ ಅವನ ಆಯುಧವನ್ನು ಕಸಿದುಕೊಳ್ಳಲು ಪ್ರಾಂಶುಪಾಲರು ಸೇರಿದಂತೆ ಸ್ಥಳದಲ್ಲಿದ್ದವರು ಪ್ರಯತ್ನಿಸುತ್ತಾರೆ. ಆದರೆ  ವಿದ್ಯಾರ್ಥಿಯು ತನ್ನ ಪಿಸ್ತೂಲಿನಿಂದ ಅವರ ಮೇಲೂ ಹಲ್ಲೆ ನಡೆಸುತ್ತಾನೆ.

ನಂತರ ಕೆಲವರು ಧಾವಿಸಿ ವಿದ್ಯಾರ್ಥಿಯನ್ನು ಹಿಡಿದುಕೊಂಡು ಮರದ ಕೋಲಿನಿಂದ ಅವನನ್ನು ಬೆದರಿಸುತ್ತಾರೆ. ಬಳಿಕ ಮಾತನಾಡಿದ ಸಂತ್ರಸ್ಥ ಪ್ರಾಂಶುಪಾಲ ವಾಗ್ದಂಡನೆಗೆ ಒಳಗಾಗಿದ್ದ ವಿದ್ಯಾರ್ಥಿಗೆ ಇಷ್ಟೊಂದು ಬೇಸರವಾಗಿದೆ ಎಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
 

SCROLL FOR NEXT