ದೇಶ

ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿಗಳ ಬಗ್ಗೆ ಇನ್ನೂ ಕುತೂಹಲ: ಅಶೋಕ್ ಗೆಹ್ಲೊಟ್ ಇಂದು ಸೋನಿಯಾ ಭೇಟಿ ಸಾಧ್ಯತೆ

Sumana Upadhyaya

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ, ರಾಜಸ್ತಾನದ ಹಠಾತ್ ರಾಜಕೀಯ ಬೆಳವಣಿಗೆಗಳ ಮಧ್ಯೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನಡುವಿನ ಬಹುನಿರೀಕ್ಷಿತ ಸಭೆ ಇಂದು ಗುರುವಾರಕ್ಕೆ ಮುಂದೂಡಲ್ಪಟ್ಟಿದೆ.

 ಕಾಂಗ್ರೆಸ್‌ ಅಧ್ಯಕ್ಷೀಯ ಸ್ಥಾನಕ್ಕೆ ಯಾರೆಲ್ಲಾ ನಾಮಪತ್ರ ಸಲ್ಲಿಸುತ್ತಾರೆ ಎಂಬ ಕುತೂಹಲ ಕೊನೆಯ ದಿನದವರೆಗೂ ಸಾಗಿದೆ. ನಿನ್ನೆ ಜೈಪುರದಲ್ಲಿ ತಮ್ಮ ನಿಕಟವರ್ತಿಗಳೊಂದಿಗೆ ಕಳೆದ ಗೆಹ್ಲೊಟ್ ಅವರು ಇಂದು ದೆಹಲಿಗೆ ಆಗಮಿಸಲಿದ್ದಾರೆ. 

ಗೆಹ್ಲೋಟ್ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಒಪ್ಪುತ್ತಾರೆಯೇ ಅಥವಾ ಇಲ್ಲವೇ ಎಂಬ ಕುತೂಹಲ ಮುಂದುವರಿಯುತ್ತಿದ್ದಂತೆ, ಇತರ ಕಾಂಗ್ರೆಸ್ ಸಂಭಾವ್ಯರ ಹೆಸರುಗಳು ಕೇಳಿಬರುತ್ತಿವೆ. ಪಟ್ಟಿಯಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಹೆಸರು ಕೇಳಿಬರುತ್ತಿದ್ದು, ಅವರು ರಾಹುಲ್ ಗಾಂಧಿಯವರೊಂದಿಗೆ ನಿಕಟ ವೈಯಕ್ತಿಕ ಸಂಪರ್ಕ ಇರಿಸಿಕೊಂಡಿದ್ದಾರೆ. ಸೋನಿಯಾ ಅವರ ನಿಕಟವರ್ತಿ ಎಂದು ಪರಿಗಣಿಸಲಾದ ಗಾಂಧಿ ಕುಟುಂಬದ ನಿಷ್ಠಾವಂತ ಅಂಬಿಕಾ ಸೋನಿ ಕೂಡ ಮತಪಟ್ಟಿಯಲ್ಲಿರಬಹುದು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಮತ್ತು ಕಾಂಗ್ರೆಸ್‌ನ ಮಾಜಿ ಹರಿಯಾಣ ಅಧ್ಯಕ್ಷೆ ಕುಮಾರಿ ಸೆಲ್ಜಾ ಅವರಂತಹ ಪಕ್ಷದ ಉನ್ನತ ದಲಿತ ನಾಯಕರು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷದ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಅವರ ಹೆಸರನ್ನು ಸಂಭಾವ್ಯ ಸ್ಪರ್ಧಿ ಎಂದು ಉಲ್ಲೇಖಿಸಲಾಗಿದೆ.

ನಿನ್ನೆ ಸೋನಿಯಾ ಗಾಂಧಿ ಅವರು ರಾಜಸ್ಥಾನ ಬಿಕ್ಕಟ್ಟಿನ ಕುರಿತು ಅಂಬಿಕಾ ಸೋನಿ ಮತ್ತು ಎ ಕೆ ಆಂಟನಿ ಅವರ ಜೊತೆ ಸಮಾಲೋಚಿಸಿದ್ದಾರೆ. ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಕೊನೆಯ ಬಾರಿಗೆ ಗೆಹ್ಲೋಟ್ ಅವರನ್ನು ಭೇಟಿಯಾಗುವಂತೆ ಈ ಇಬ್ಬರು ನಾಯಕರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

SCROLL FOR NEXT