ದೇಶ

ಜಮ್ಮು ಮತ್ತು ಕಾಶ್ಮೀರ: ಡ್ರೋನ್‌ನಿಂದ ಬಿದ್ದಿದ್ದ ಪ್ಯಾಕೆಟ್‌ನಿಂದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶಪಡಿಸಿಕೊಂಡ ಪೊಲೀಸರು

Ramyashree GN

ಸಾಂಬಾ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋನ್‌ನಿಂದ ಬೀಳಿಸಲಾಗಿದೆ ಎಂದು ಶಂಕಿಸಲಾದ ಪ್ಯಾಕೇಜ್‌ನಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ಸಾಮಗ್ರಿಗಳ ಸಂಗ್ರಹವನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ರಖ್ ಬರೋತಿಯ ರೈಲ್ವೆ ಮಾರ್ಗದ ಬಳಿ ಪತ್ತೆಯಾದ ಪ್ಯಾಕೇಜ್‌ನಲ್ಲಿ ಚೀನಾ ನಿರ್ಮಿತ ಮೂರು ಪಿಸ್ತೂಲ್ ಮತ್ತು 4 ಗ್ರೆನೇಡ್‌ಗಳಿವೆ ಎಂದು ಅವರು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಸಾಂಬಾ) ಸುರೀಂದರ್ ಚೌಧರಿ ಸುದ್ದಿಗಾರರೊಂದಿಗೆ ಮಾತನಾಡಿ, 'ವಿಜಯಪುರ ಭಾಗದ ರಖ್ ಬರೋತಿಯ ಹೊಲದಲ್ಲಿ ಶಂಕಿತ ಪ್ಯಾಕೇಜ್ ಇರುವ ಬಗ್ಗೆ ನಮಗೆ ಮಾಹಿತಿ ಬಂದಿತು. ನಾವು ತಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ತಂಡಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದೇವೆ' ಎಂದರು.

ಪೊಟ್ಟಣದಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಇದೆಯೇ ಎಂದು ಮೊದಲು ನಾವು ನೋಡಿದೆವು. ಪೊಟ್ಟಣದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಮೂರು ಚೀನಾ ನಿರ್ಮಿತ ಪಿಸ್ತೂಲ್‌ಗಳು, ಆರು ಮ್ಯಾಗಜೀನ್‌ಗಳು, 48 ರೌಂಡ್ಸ್‌ಗಳು ಮತ್ತು ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳು ಸೇರಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗಡಿಯಾಚೆಯಿಂದ ಡ್ರೋನ್ ಮೂಲಕ ಈ  ಪೊಟ್ಟಣವನ್ನು ಇಲ್ಲಿ ಬೀಳಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಡ್ರೋನ್ ಮೂಲಕ (ಅಂತರರಾಷ್ಟ್ರೀಯ ಗಡಿಯುದ್ದಕ್ಕೂ) ಶಸ್ತ್ರಾಸ್ತ್ರಗಳನ್ನು ಬೀಳಿಸಲಾಗಿದೆ ಎಂದು ತೋರುತ್ತಿದೆ. ಈ ಪೊಟ್ಟಣದಲ್ಲಿ ಬಾಕ್ಸ್ ಮತ್ತು 50 ಮೀಟರ್ ಅಳತೆಯ ಪ್ಲಾಸ್ಟಿಕ್‌ನ ಉದ್ದನೆಯ ದಾರವನ್ನು ಹೊಂದಿತ್ತು. ತನಿಖೆಯ ನಂತರವೇ ನಿಖರವಾದ ವಿವರಗಳನ್ನು ಕಂಡುಹಿಡಿಯಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT