ದೇಶ

ರಾಹುಲ್ ಗಾಂಧಿಗೆ ಮಿಂಚಿನ ವೇಗದಲ್ಲಿ ಅನರ್ಹತೆ, ಬಿಜೆಪಿ ಸಂಸದರಿಗೆ ಬೇರೆ ನೀತಿ: ಕೇಂದ್ರದ ದ್ವಿಮುಖ ನೀತಿ ಬಗ್ಗೆ ಖರ್ಗೆ ಕಿಡಿ

Ramyashree GN

ನವದೆಹಲಿ: ರಾಹುಲ್ ಗಾಂಧಿ ಅವರನ್ನು ಮಿಂಚಿನ ವೇಗದಲ್ಲಿ ಅನರ್ಹಗೊಳಿಸಿದರೆ, ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಗುಜರಾತ್ ಸಂಸದರಿಗೆ ಮಾತ್ರ ಅದೇ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಕೇಂದ್ರದ ದ್ವಿಮುಖ ನೀತಿ ಬಗ್ಗೆ ಕಿಡಿಕಾರಿದರು.

ನ್ಯಾಯಾಲಯದಿಂದ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಜೆಪಿಯ ಅಮ್ರೇಲಿ ಸಂಸದ ನಾರಣಭಾಯ್ ಭಿಖಾಭಾಯಿ ಕಚಾಡಿಯಾ ಅವರನ್ನು ಉಲ್ಲೇಖಿಸಿ ಖರ್ಗೆ ಈ ರೀತಿ ಹೇಳಿದ್ದಾರೆ. ಕಚಾಡಿಯಾ ಅವರ ಶಿಕ್ಷೆಯನ್ನು ನಂತರ ಸುಪ್ರೀಂ ಕೋರ್ಟ್ ರದ್ದುಗೊಳಿಸಿತು.

ಗುಜರಾತಿನ ಸೂರತ್‌ ನ್ಯಾಯಾಲಯವು ಮಾರ್ಚ್ 23 ರಂದು ಪ್ರಧಾನಿ ನರೇಂದ್ರ ಮೋದಿಯವರ ಉಪನಾಮವನ್ನು ಇಬ್ಬರು ಪರಾರಿಯಾದ ಉದ್ಯಮಿಗಳೊಂದಿಗೆ ಲಿಂಕ್ ಮಾಡಿದ ಭಾಷಣಕ್ಕಾಗಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಅದಾದ ಒಂದು ದಿನದ ನಂತರ, ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯ ಸ್ಥಾನದಿಂದಲೂ ಅನರ್ಹಗೊಳಿಸಲಾಯಿತು.

ಗುಜರಾತ್ ಸಂಸದರಿಗೆ ಸಂಸತ್ತಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಆದರೆ, ಸತ್ಯವನ್ನು ಮಾತನಾಡುವ ವ್ಯಕ್ತಿಯನ್ನು ಸಂಸತ್ತಿನಿಂದ ಹೊರಗಿಡಲಾಗಿದೆ ಎಂದು ಖರ್ಗೆ ಹೇಳಿದರು.

'ಇದು ಮೋದಿ ಸರ್ಕಾರದ ಬೂಟಾಟಿಕೆ ಮತ್ತು ದ್ವಂದ್ವ ನೀತಿಯ ಪರಮಾವಧಿ. ಗುಜರಾತ್‌ನ ಬಿಜೆಪಿ ಸಂಸದರಿಗೆ ಸ್ಥಳೀಯ ನ್ಯಾಯಾಲಯವಾದ ಸೆಷನ್ಸ್ ಕೋರ್ಟ್ ಮತ್ತು ಹೈಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ, ಅದಾದ 16 ದಿನಗಳವರೆಗೆ ಯಾವುದೇ ಅನರ್ಹತೆ ಇರಲಿಲ್ಲ. ಆದರೆ, ಮಿಂಚಿನ ವೇಗದಲ್ಲಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಯಿತು' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಮೂಲಕ ಮೋದಿ ಆಡಳಿತದಲ್ಲಿ ಯಾರಿಗೆ ಪರಿಹಾರ ಸಿಗುತ್ತಿದೆ, ಯಾರಿಗೆ ಶಿಕ್ಷೆಯಾಗುತ್ತಿದೆ ಎಂಬುದನ್ನು ನೋಡಬಹುದು ಎಂದರು.

ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ರಾಹುಲ್ ಗಾಂಧಿಯವರ ಅನರ್ಹತೆಯ ಬಗ್ಗೆ ಚರ್ಚೆ ನಡೆಸುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಏಪ್ರಿಲ್ 3 ರಂದು ಸೂರತ್‌ನ ಸೆಷನ್ಸ್ ನ್ಯಾಯಾಲಯವು ರಾಹುಲ್ ಗಾಂಧಿಗೆ ಜಾಮೀನು ನೀಡಿತು ಮತ್ತು 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅವರ ಅಪರಾಧಕ್ಕೆ ತಡೆ ನೀಡುವಂತೆ ಮಾಡಿದ ಮನವಿಯನ್ನು ಏಪ್ರಿಲ್ 13 ರಂದು ವಿಚಾರಣೆ ನಡೆಸಲಿದೆ.

SCROLL FOR NEXT