ದೇಶ

1984ರ ಸಿಖ್ ವಿರೋಧಿ ದಂಗೆ ಪ್ರಕರಣ: ಜಗದೀಶ್ ಟೈಟ್ಲರ್ ಧ್ವನಿ ಮಾದರಿ ಸಂಗ್ರಹಿಸಿದ ಸಿಬಿಐ

Nagaraja AB

ನವದೆಹಲಿ: ದೆಹಲಿಯ ಪುಲ್ ಬಂಗಾಶ್ ಪ್ರದೇಶದಲ್ಲಿ 1984 ರ ಸಿಖ್ ವಿರೋಧಿ ದಂಗೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರ ಧ್ವನಿ ಮಾದರಿಯನ್ನು ಸಿಬಿಐ ಮಂಗಳವಾರ ಸಂಗ್ರಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ ಮೂರು ಮುಕ್ತಾಯದ ವರದಿಗಳನ್ನು ಸಲ್ಲಿಸಿರುವ ಸಂಸ್ಥೆ, ಪ್ರಕರಣದಲ್ಲಿ ಹೊಸ ಪುರಾವೆ  ಪಡೆದ ನಂತರ ಈ ಕ್ರಮವನ್ನು ಕೈಗೊಂಡಿದೆ. ಟೈಟ್ಲರ್ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಆಗಮಿಸಿದ ನಂತರ ಅವರ ಧ್ವನಿ ಮಾದರಿಯನ್ನು ತಜ್ಞರು ಸಂಗ್ರಹಿಸಿದ್ದಾರೆ . ಧ್ವನಿ ಮಾದರಿ ಸಂಗ್ರಹ ಪ್ರಕ್ರಿಯೆ ಮುಗಿದ  ನಂತರ ಮಧ್ಯಾಹ್ನ ಮನೆಗೆ ತೆರಳಲು ಅವರಿಗೆ ಅವಕಾಶ ನೀಡಲಾಯಿತು ಎಂದು ಅವರು ಹೇಳಿದ್ದಾರೆ. 

ಇದು ಉತ್ತರ ದೆಹಲಿಯ ಗುರುದ್ವಾರ ಪುಲ್ ಬಂಗಾಶ್‌ನಲ್ಲಿ ನಡೆದ ಗಲಭೆಗೆ ಸಂಬಂಧಿಸಿದೆ. ನವೆಂಬರ್ 1, 1984 ರಂದು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಸಿಖ್ ಅಂಗರಕ್ಷಕರಿಂದ ಹತ್ಯೆಯಾದ ಒಂದು ದಿನದ ನಂತರ ಮೂವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಸಿಬಿಐನ ಮುಕ್ತಾಯದ ವರದಿಗಳನ್ನು ಪ್ರಶ್ನಿಸಿ ಸಂತ್ರಸ್ತರು ಮೇಲ್ಮನವಿ ಸಲ್ಲಿಸಿದ್ದರು. 

2015ರ ಡಿಸೆಂಬರ್‌ನಲ್ಲಿ ನ್ಯಾಯಾಲಯವು ಈ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು ಮತ್ತು ಯಾವುದೇ ಅಂಶವನ್ನು ತನಿಖೆ ಮಾಡದೆ ಬಿಡದಂತೆ ನೋಡಿಕೊಳ್ಳಲು ಪ್ರತಿ ಎರಡು ತಿಂಗಳಿಗೊಮ್ಮೆ ತನಿಖೆಯನ್ನು ಮೇಲ್ವಿಚಾರಣೆ ಮಾಡುವುದಾಗಿ ಹೇಳಿತ್ತು. ಸಿಬಿಐ ಕೂಡ ದೆಹಲಿಯ ವಿಶೇಷ ನ್ಯಾಯಾಲಯದ ಮುಂದೆ ಈ ವಿಷಯದಲ್ಲಿ ತನ್ನ ಸ್ಥಿತಿ ವರದಿಗಳನ್ನು ನಿಯಮಿತವಾಗಿ ಸಲ್ಲಿಸುತ್ತಿದೆ.

SCROLL FOR NEXT