ದೇಶ

500 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವ ಜಗನ್ ದೇಶದ ಅತ್ಯಂತ ಶ್ರೀಮಂತ ಸಿಎಂ, ದೀದಿ ಬಡ ಮುಖ್ಯಮಂತ್ರಿ

Lingaraj Badiger

ನವದೆಹಲಿ: 500 ಕೋಟಿ ರೂ.ಗೂ ಅಧಿಕ ಆಸ್ತಿ ಹೊಂದಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ದೇಶದ ಅತ್ಯಂತ ಶ್ರೀಮಂತ ಸಿಎಂ ಆಗಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ ಅತ್ಯಂತ ಬಡ ಸಿಎಂ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ತಿಳಿಸಿದೆ.

ಎಡಿಆರ್, ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಿದ ನಂತರ ಈ ವರದಿ ಬಿಡುಗಡೆ ಮಾಡಿದ್ದು, ದೇಶದ 30 ಮುಖ್ಯಮಂತ್ರಿಗಳ ಪೈಕಿ 29 ಮುಖ್ಯಮಂತ್ರಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಪ್ರತಿ ಸಿಎಂ ಸರಾಸರಿ ಆಸ್ತಿ 33.96 ಕೋಟಿ ರೂ. ಇದೆ ಎಂದು ವರದಿ ಹೇಳಿದೆ.

30 ಮುಖ್ಯಮಂತ್ರಿಗಳು, ಅವರ ಸ್ವಯಂ ಪ್ರಮಾಣ ಪತ್ರದ ಅಫಿಡವಿಟ್‌ಗಳ ಆಧಾರದ ಮೇಲೆ ಈ ವರದಿ ವಿಶ್ಲೇಷಿಸಲ್ಪಟ್ಟಿದ್ದು, ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು 510 ಕೋಟಿ ರೂಪಾಯಿ ಆಸ್ತಿಯೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅರುಣಾಚಲ ಪ್ರದೇಶದ ಸಿಎಂ ಪೇಮಾ ಖಂಡು 163 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಒಡಿಶಾ ಸಿಎಂ ನವೀನ್ ಪಟ್ನಾಯಕ್ 63 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು 1 ಕೋಟಿ ರೂಪಾಯಿ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಇನ್ನು 15 ಲಕ್ಷ ರೂಪಾಯಿ ಆಸ್ತಿ ಹೊಂದಿರುವ ಮಮತಾ ಬ್ಯಾನರ್ಜಿ ಅವರು ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎಂದು ಎಡಿಆರ್ ವರದಿ ತಿಳಿಸಿದೆ.

SCROLL FOR NEXT