ನವದೆಹಲಿ: ಮಹಾರಾಷ್ಟ್ರ ಮತ್ತು ಗೋವಾದ ಎನ್‌ಡಿಎ ಸಂಸದರ ಸಭೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಠಾಕ್ರೆ ಅವರ ಹೆಸರನ್ನು ಹೇಳದೆಯೇ ಟೀಕಿಸಿದರು ಮತ್ತು ಅವರು (ಠಾಕ್ರೆ) 'ಬಿಜೆಪಿ-ಶಿವಸೇನೆ ಮೈತ್ರಿಯನ್ನು ಮುರಿದಿದ್ದಾರೆ ಹೊರತು, ಬಿಜೆಪಿಯನ್ನು ಅಲ್ಲ' ಎಂದು ಹೇಳಿದರು.
ಬಿಜೆಪಿಗೆ ಮಿತ್ರಪಕ್ಷಗಳೇ ಮುಖ್ಯ. ಬಿಜೆಪಿಯೊಂದಿಗೆ ಶಿವಸೇನೆ ಅಧಿಕಾರದಲ್ಲಿದ್ದಾಗಲೂ ಸಾಮ್ನಾ (ಶಿವಸೇನೆಯ ಮುಖವಾಣಿ) ಯಾವುದೇ ಕಾರಣವಿಲ್ಲದೆ ತಮ್ಮನ್ನು ಮತ್ತು ಅವರ ಸರ್ಕಾರವನ್ನು ಟೀಕಿಸುತ್ತಿತ್ತು. ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿತ್ತು. ಆದರೆ ಇದರ ಹೊರತಾಗಿಯೂ ಬಿಜೆಪಿ ಸಮ್ಮಿಶ್ರ ನೀತಿಯನ್ನು ಅನುಸರಿಸಿತು. ಅದನ್ನೆಲ್ಲ ಸಹಿಸಿಕೊಂಡಿತು ಮತ್ತು ಕೆಲವೊಮ್ಮೆ ಅದನ್ನು ಅವರು ತುಂಬಾ ಲಘುವಾಗಿ ತೆಗೆದುಕೊಂಡರು ಎಂದು ಪ್ರಧಾನಿ ಮೋದಿ ಹೇಳಿದರು.
ಅವರು (ಠಾಕ್ರೆ) ಅಧಿಕಾರದಲ್ಲಿ ಉಳಿಯಲು ಮತ್ತು ಅದೇ ಸಮಯದಲ್ಲಿ ಟೀಕಿಸಲು ಬಯಸುತ್ತಾರೆ. ಈ ಎರಡು ವಿಷಯಗಳು (ಸಮ್ಮಿಶ್ರ ಮತ್ತು ಟೀಕೆ) ಒಟ್ಟಿಗೆ ಇರಲು ಹೇಗೆ ಸಾಧ್ಯ?. ಬಿಜೆಪಿಗೆ ಎನ್‌ಡಿಎ ಮತ್ತು ಅದರ ಮಿತ್ರಪಕ್ಷಗಳು 'ಮುಖ್ಯ'. ಕಡಿಮೆ ಸಂಖ್ಯೆಯ ಶಾಸಕರಿದ್ದರೂ ಬಿಜೆಪಿಯು ನಿತೀಶ್ ಕುಮಾರ್ ಅವರನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಏಕನಾಥ್ ಶಿಂಧೆ ಬಿಜೆಪಿಯೊಂದಿಗೆ ಬಂದಾಗ, 'ನಾವು ಶಿಂಧೆ ಅವರನ್ನೇ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಏಕೆಂದರೆ, ಬಿಜೆಪಿಗೆ ಸ್ನೇಹಿತರು ಮತ್ತು ಮಿತ್ರಪಕ್ಷಗಳು ಮುಖ್ಯ ಎಂದು ಹೇಳಿದರು.
ಇದನ್ನೂ ಓದಿ: 'ಇಂದು ಭಾರತ ಒಂದೇ ಧ್ವನಿಯಲ್ಲಿ ಭ್ರಷ್ಟಾಚಾರ, ರಾಜವಂಶ, ತುಷ್ಠೀಕರಣ ಭಾರತ ಬಿಟ್ಟು ತೊಲಗಲಿ ಎಂದು ಹೇಳುತ್ತಿದೆ': ಪ್ರಧಾನಿ ಮೋದಿ
'ಬಿಜೆಪಿಯೊಂದಿಗೆ ಉಳಿಯುವವರನ್ನು ಗೌರವಿಸಲಾಗುತ್ತದೆ' ಎಂದು ಪ್ರಧಾನ ಮಂತ್ರಿಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.
ಶರದ್ ಪವಾರ್ ಅವರನ್ನು ಟಾರ್ಗೆಟ್ ಮಾಡಿದ ಪ್ರಧಾನಿ, ಸ್ವಜನಪಕ್ಷಪಾತದಿಂದಾಗಿ ಪವಾರ್ ಅನೇಕ ಪ್ರತಿಭಾವಂತರಿಗೆ ಉತ್ತೇಜನ ನೀಡಲಿಲ್ಲ ಎಂದು ದೂರಿದ್ದಾರೆ.
ಪ್ರಫುಲ್ ಪಟೇಲ್ ಮತ್ತು ಎನ್‌ಸಿಪಿಯ (ಅಜಿತ್ ಪವಾರ್ ಬಣ) ಹಲವು ಸಂಸದರು ಸಭೆಯಲ್ಲಿ ಉಪಸ್ಥಿತರಿದ್ದರು.
'ಕಾಂಗ್ರೆಸ್ ಮತ್ತು ಶರದ್ ಪವಾರ್ ನಡುವಿನ ಸಂಬಂಧದಲ್ಲಿನ ವಿರೋಧಾಭಾಸ'ವನ್ನು ಎತ್ತಿ ಹಿಡಿದ ಪ್ರಧಾನಿ, 'ರಾಜಮನೆತನದ ಕಾರಣದಿಂದಾಗಿ ಪವಾರ್ ಅವರನ್ನು ದೇಶದ ಪ್ರಧಾನಿಯಾಗಲು ಕಾಂಗ್ರೆಸ್ ಬಿಡಲಿಲ್ಲ ಮತ್ತು ಇದು ಇತರ ಅನೇಕ ಪ್ರತಿಭಾವಂತ ನಾಯಕರನ್ನು ಬೆಳೆಸಲಿಲ್ಲ' ಎಂದು ಹೇಳಿದರು.
ರಾಜಕೀಯದಲ್ಲಿರುವಾಗ ತಪ್ಪು ಮಾಡಿದವರಿಗೆ ಕಠಿಣ ಎಚ್ಚರಿಕೆ ನೀಡಿದ ಪ್ರಧಾನಿ, ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಂಡು, ಟಿಕೆಟ್ ನಿರಾಕರಿಸಲಾಗಿದೆ ಮತ್ತು ತಪ್ಪಿಗೆ ಶಿಕ್ಷೆಯನ್ನೂ ನೀಡಿದ್ದೇವೆ ಮತ್ತು ಚುನಾವಣಾ ಪ್ರಚಾರದ ಸಮಯದಲ್ಲಿ ಮಾಡಿದ ತಪ್ಪಿಗೂ ಅವರಿಗೆ ಶಿಕ್ಷೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯ ಒಬಿಸಿ ಹಿನ್ನೆಲೆ ಉಲ್ಲೇಖಿಸಿ ರಾಹುಲ್, I.N.D.I.A ವಿರುದ್ಧ ಬಿಜೆಪಿ ಪ್ರತಿದಾಳಿ!
ಇದಕ್ಕೂ ಮುನ್ನ ರಾಜಸ್ಥಾನದ ಎನ್‌ಡಿಎ ಸಂಸದರ ಜತೆಗಿನ ಸಭೆಯಲ್ಲಿ ಪ್ರಧಾನಿ ಮೋದಿ, ಚುನಾವಣೆಯಲ್ಲಿ ಗೆಲ್ಲಲು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಎಲ್ಲ ಸಂಸದರಿಗೆ ಕರೆ ನೀಡಿದರು.
ಮೂಲಗಳ ಪ್ರಕಾರ, ರಾಜಸ್ಥಾನದಲ್ಲಿ ಯಾವುದೇ ಸರ್ಕಾರದ ಅವಧಿಯಲ್ಲಿ, ರಾಜ್ಯದ ಸ್ಥಿತಿ ಸದ್ಯ ಇರುವಷ್ಟು ಕೆಟ್ಟದಾಗಿರಲಿಲ್ಲ ಎಂದು ಹೇಳಿದ್ದಾರೆ.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿದ ಅವರು, ದೇಶದ ಅಭಿವೃದ್ಧಿಗಾಗಿ ರಾಜಸ್ಥಾನವನ್ನು ಗೆಲ್ಲುವುದು ಬಹಳ ಮುಖ್ಯ ಮತ್ತು ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ರಾಜಮನೆತನ, ಭ್ರಷ್ಟಾಚಾರ ಮತ್ತು ಧ್ರುವೀಕರಣದ ವಿರುದ್ಧ ಹೋರಾಡಲು ಬಿಜೆಪಿಯ ‘ಕ್ವಿಟ್ ಇಂಡಿಯಾ’ ಅಭಿಯಾನವು ಪ್ರಾರಂಭವಾಗಲಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.