ದೇಶ

ಮಹಾರಾಷ್ಟ್ರ: ಅಣುಕು ಕಾರ್ಯಾಚರಣೆ ವೇಳೆ ಉಗ್ರಗಾಮಿ ವೇಷಧಾರಿ ಪೊಲೀಸ್ ಅಧಿಕಾರಿ ಕಪಾಳಕ್ಕೆ ಹೊಡೆದ ವ್ಯಕ್ತಿ, ವಿಡಿಯೋ ವೈರಲ್!

Srinivasamurthy VN

ಧುಲೆ: ಉಗ್ರದಾಳಿ ಅಣುಕು ಕಾರ್ಯಾಚರಣೆ ವೇಳೆ ಉಗ್ರಗಾಮಿಯ ವೇಷ ಧರಿಸಿದ್ದ ಪೊಲೀಸ್ ಅಧಿಕಾರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಧುಲೆ ನಗರದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ‘ಉಗ್ರನ ವೇಷ’ ಧರಿಸಿದ್ದ ಪೊಲೀಸ್ ಅಧಿಕಾರಿಯ ಕೆನ್ನೆಗೆ ಬಾರಿಸಿರುವ ಘಟನೆ ನಡೆದಿದ್ದು, ಅದು ಅಣಕು ಕಾರ್ಯಾಚರಣೆ ಎಂಬ ಸಂಗತಿ ತಿಳಿಯದೆ ಆ ವ್ಯಕ್ತಿ ಅಂತಹ ಕೃತ್ಯ ನಡೆಸಿದ್ದರಿಂದಾಗಿ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟು ಕಳಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ಈ ಸಂಬಂಧ ಸ್ಥಳೀಯರೊಬ್ಬರು ಕಪಾಳಮೋಕ್ಷದ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಅಣುಕು ಕಾರ್ಯಾಚರಣೆ ವೇಳೆ ಉಗ್ರರ ವೇಷಧಾರಿ ಪೊಲೀಸರು ಧುಲೆ ನಗರದ ದೇವಾಲಯವೊಂದರಲ್ಲಿ ದಾಳಿ ಮಾಡಿದ್ದು, ಈ ವೇಳೆ ದೇವಾಲಯದಲ್ಲಿದ್ದ ವ್ಯಕ್ತಿಯ ಮಕ್ಕಳು ಭಯದಿಂದ ಅಳತೊಡಗಿದ್ದಾರೆ. ಈ ವೇಳೆ ಆಕ್ರೋಶಗೊಂಡ ವ್ಯಕ್ತಿ ಉಗ್ರಗಾಮಿ ವೇಷಧಾರಿ ಅಧಿಕಾರಿ ಬಳಿ ಹೋಗಿ ಕಪಾಳಕ್ಕೆ ಹೊಡೆದಿದ್ದಾನೆ. ಕೂಡಲೇ ಸ್ಥಳದಲ್ಲಿ ಮಫ್ತಿಯಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ಇದು ಅಣುಕು ಕಾರ್ಯಾಚರಣೆ ಎಂದು ಸಮಾಧಾನ ಪಡಿಸಿದ್ದಾರೆ.

ಇನ್ನು ಘಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್ ಪೆಕ್ಟರ್ ಹೇಮಂತ್ ಪಾಟೀಲ್, ಧುಲೆ ನಗರದ ದೇವಾಲಯವೊಂದರಲ್ಲಿ ಉಗ್ರಗಾಮಿ ನಿಗ್ರಹ ಪ್ರತಿಸ್ಪಂದನಾ ಅಣಕು ಕಾರ್ಯಾಚರಣೆಯಲ್ಲಿ ಸುಮಾರು 80-90ಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು. ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ ಸದ್ಯ ತನ್ನ ವರ್ತನೆಯಿಂದ ಪ್ರಶ್ನೆಗೊಳಗಾಗಿರುವ ವ್ಯಕ್ತಿಯೂ ತನ್ನ ಕುಟುಂಬದ ಸದಸ್ಯರೊಂದಿಗೆ ದೇವಾಲಯದಲ್ಲಿ ಉಪಸ್ಥಿತನಿದ್ದ. ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ ಉಗ್ರಗಾಮಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಪೊಲೀಸರು ಪ್ರಾರಂಭಿಸುತ್ತಿದ್ದಂತೆಯೆ, ಪೊಲೀಸರನ್ನು ಎದುರುಗೊಂಡಿರುವ ಆ ವ್ಯಕ್ತಿಯು, ಉಗ್ರನ ವೇಷ ಧರಿಸಿದ್ದ ಪೊಲೀಸ್ ಅಧಿಕಾರಿಯ ಕೆನ್ನೆಗೆ ಬಾರಿಸಿ, “ಸಣ್ಣ ಮಕ್ಕಳು ಹೆದರಿಕೊಂಡಿದ್ದಾರೆ ಮತ್ತು ಅಳಲು ಪ್ರಾರಂಭಿಸಿದ್ದಾರೆ ಎಂಬುದು ನಿನಗೆ ಅರ್ಥವಾಗುತ್ತಿಲ್ಲವೆ?” ಎಂದು ಪ್ರಶ್ನಿಸಿದ್ದಾನೆ ಎಂದಿದ್ದಾರೆ.

ಕೂಡಲೇ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸ್ ಅಧಿಕಾರಿಗಳು, ಅದು ಪೊಲೀಸರ ಅಣಕು ಕಾರ್ಯಾಚರಣೆ ಎಂಬ ಸಂಗತಿಯನ್ನು ಆ ವ್ಯಕ್ತಿಗೆ ವಿವರಿಸಿದ್ದಾರೆ. “ನಂತರ ಆ ವ್ಯಕ್ತಿ ಪೊಲೀಸರ ಕ್ಷಮೆ ಯಾಚಿಸಿದ ಮತ್ತು ಆ ವ್ಯಕ್ತಿಯ ವಿರುದ್ಧ ಯಾವುದೇ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದಿಲ್ಲ” ಎಂದು ಪೊಲೀಸ್ ಇನ್ಸ್ ಪೆಕ್ಟರ್ ಹೇಮಂತ್ ಪಾಟೀಲ್ ತಿಳಿಸಿದ್ದಾರೆ.

SCROLL FOR NEXT