ದೇಶ

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಭಾರೀ ಮಳೆ ಪ್ರವಾಹಕ್ಕೆ ಭೂಕುಸಿತ, 7 ಮಂದಿ ಸಾವು

Shilpa D

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು, ಮತ್ತೆ ಮೇಘಸ್ಪೋಟ ಸಂಭವಿಸಿದೆ, ಇದರಲ್ಲಿ 7 ಮಂದಿ ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ

ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟ ಮತ್ತೆ ಜೋರಾಗಿದೆ. ಮೇಘಸ್ಫೋಟ ಸಂಭವಿಸಿ, ಸೋಲನ್‌ ಜಿಲ್ಲೆಯ ಕಂದಘಾಟ್ ಉಪ ವಿಭಾಗದ ಜಾಡೋನ್ ಗ್ರಾಮಕ್ಕೆ ನೀರು ನುಗ್ಗಿದೆ.

ಕಂದಘಾಟ್‌ ವಿಭಾಗದ ಜಡೋನ್‌ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಕೆಲವೆಡೆ ಭೂಕುಸಿತ ಸಂಭವಿಸಿದೆ. ಇನ್ನು ಪ್ರವಾಹದ ಅಬ್ಬರಕ್ಕೆ ಎರಡು ಮನೆಗಳು, ಹತ್ತಾರು ವಾಹನಗಳು ಕೊಚ್ಚಿಹೋಗಿವೆ. ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳು, ಕಟ್ಟಡಗಳು ಕೂಡ ಕೊಚ್ಚಿಹೋಗಿವೆ.

ಘಟನೆಯಲ್ಲಿ ಎರಡು ಮನೆಗಳು ಮತ್ತು ಒಂದು ದನದ ಕೊಟ್ಟಿಗೆ ಕೊಚ್ಚಿ ಹೋಗಿದ್ದು, ಅವಶೇಷಗಳಡಿಯಲ್ಲಿ ಸಿಲುಕಿ ಏಳು ಮಂದಿ ಮೃತಪಟ್ಟಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ ಹಾಗೂ ಐವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಸೋಲನ್‌ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಶಿಮ್ಲಾ–ಚಂಡೀಗಢ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು, ಕೆರೆಕಟ್ಟೆಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ –ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ತಿಳಿಸಿದ್ದಾರೆ.

ಶಿಮ್ಲಾ-ಚಂಡೀಗಢ ರಸ್ತೆಯಲ್ಲಿ ಸಂಚಾರವೇ ಸ್ಥಗಿತಗೊಂಡಿದ್ದು, ಜನರ ಪರದಾಡುವಂತಾಗಿದೆ. ಹಿಮಾಚಲ ಪ್ರದೇಶಕ್ಕೆ ಜೂನ್‌ 24ರಂದು ಮುಂಗಾರು ಪ್ರವೇಶವಾಗಿದ್ದು, ಇದುವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮೇಘಸ್ಫೋಟದಿಂದಾಗಿ ಪ್ರವಾಹ ಉಂಟಾಗಿ ಏಳು ಜನ ಮೃತಪಟ್ಟಿರುವುದಕ್ಕೆ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ಅವರು ಸಂತಾಪ ಸೂಚಿಸಿದರು. “ಸೋಲನ್‌ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಏಳು ಜನ ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ಬೇಸರವಾಯಿತು. ಕುಟುಂಬಸ್ಥರ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ” ಎಂದು ಅವರು ಟ್ವೀಟ್‌ (ಈಗ X) ಮಾಡಿದ್ದಾರೆ.

SCROLL FOR NEXT