ದೇಶ

ಕೆಲವು ಕುಟುಂಬಗಳ ಹಿತಾಸಕ್ತಿ ಕಾಪಾಡುವುದೇ INDIA ದ ಉದ್ದೇಶ, ಅದೊಂದು 'ಸ್ವಾರ್ಥ ಮೈತ್ರಿ': ಬಿಜೆಪಿ

Ramyashree GN

ನವದೆಹಲಿ: ಇಂದು ಮುಂಬೈನಲ್ಲಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ ನಡೆಯುತ್ತಿದ್ದು, ತನ್ನ ಮೈತ್ರಿಕೂಟದ ಸದಸ್ಯ ಪಕ್ಷಗಳ ಚುಕ್ಕಾಣಿ ಹಿಡಿದಿರುವ ಕುಟುಂಬಗಳ ಹಿತಾಸಕ್ತಿಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಗುರಿಯನ್ನು ಹೊಂದಿರುವ 'ಸ್ವಾರ್ಥ ಮೈತ್ರಿ'ಯೇ ಇಂಡಿಯಾ ಒಕ್ಕೂಟ ಎಂದು ವಿರೋಧ ಪಕ್ಷ ಬಿಜೆಪಿ ಗುರುವಾರ ಟೀಕಿಸಿದೆ.

ಬಿಜೆಪಿ ವಿರುದ್ಧದ ತಮ್ಮ ಹೋರಾಟದಲ್ಲಿ ಕಾರ್ಯಸೂಚಿ ರೂಪಿಸಲು 28 ವಿರೋಧ ಪಕ್ಷಗಳು ಮುಂಬೈನಲ್ಲಿ ಇಂದು ಸಭೆ ಸೇರಿದ್ದು, ಆಡಳಿತ ಪಕ್ಷದ ವಕ್ತಾರ ಸಂಬಿತ್ ಪಾತ್ರಾ, ಕಾಂಗ್ರೆಸ್‌ನ 'ಕ್ಷಿಪಣಿ' ಎಂದಿಗೂ ಉಡಾವಣೆಯಾಗುವುದಿಲ್ಲ. ಏಕೆಂದರೆ, ಅದರಲ್ಲಿ ಇಂಧನವಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಯಾನ-3 ರೀತಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಯಶಸ್ವಿಯಾಗಿ ಮೂರನೇ ಬಾರಿಗೆ ಲ್ಯಾಂಡ್ ಆಗಲಿದೆ. ಏಕೆಂದರೆ, ಇದು ಅಭಿವೃದ್ಧಿಯಿಂದ ಉತ್ತೇಜಿತವಾಗಿದೆ ಎಂದು ಅವರು ಹೇಳಿದರು.

ಇಂಡಿಯಾ ಮೈತ್ರಿಕೂಟದಲ್ಲಿ ಚರ್ಚಿಸಲಾಗುತ್ತಿರುವ ಸಿಎಂಪಿ (ಸಾಮಾನ್ಯ ಕನಿಷ್ಠ ಕಾರ್ಯಕ್ರಮ) ವಾಸ್ತವವಾಗಿ 'ಭ್ರಷ್ಟಾಚಾರದ ಗರಿಷ್ಠ ಲಾಭ'ವನ್ನು ಹೊಂದಿದೆ. ಏಕೆಂದರೆ, ಈ ಎಲ್ಲಾ ಪಕ್ಷಗಳು ಒಟ್ಟಾಗಿ 20 ಲಕ್ಷ ಕೋಟಿ ರೂಪಾಯಿಗಳ ಹಗರಣಗಳನ್ನು ಪ್ರತಿನಿಧಿಸುತ್ತವೆ ಎಂದು ಅವರು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸ್ಥಿರ ಮತ್ತು ಅಭಿವೃದ್ಧಿ ಪರ ಆಡಳಿತಕ್ಕೆ ಹಾನಿ ಮಾಡುವ ಅಥವಾ ಅಡ್ಡಿಪಡಿಸುವುದು ಅವರ ಇನ್ನೊಂದು ಗುರಿಯಾಗಿದೆ. ಪ್ರತಿಪಕ್ಷಗಳ ಒಗ್ಗೂಡುವ ಪ್ರಯತ್ನವು ಮ್ಯೂಸಿಕಲ್ ಚೇರ್ ಆಟವಾಗಿದೆ ಮತ್ತು ಈ ಪಕ್ಷಗಳು ಪ್ರತಿ ಚುನಾವಣೆಗೂ ಮುನ್ನ ಬಿಜೆಪಿ ವಿರುದ್ಧ ಒಗ್ಗೂಡುತ್ತವೆ. ಆದರೆ, ಅವರ ಮೈತ್ರಿಯಲ್ಲಿಯೇ ಆಂತರಿಕ ಘರ್ಷಣೆಗಳಿವೆ ಮತ್ತು ಪ್ರಧಾನಿ ಅಭ್ಯರ್ಥಿ ಯಾರೆಂದು ನಿರ್ಧರಿಸುವುದೇ ಅವರಿಗೆ ಸವಾಲಾಗಿರುತ್ತದೆ ಎಂದು ಪಾತ್ರಾ ಹೇಳಿದರು.

ಈ ‘ಘಮಾಂಡಿಯಾ ಮೈತ್ರಿ’ ಸ್ವಾರ್ಥದ ಗುಂಪುಗಾರಿಕೆಯಾಗಿದೆ. ಸೋನಿಯಾ ಗಾಂಧಿ ಮತ್ತು ಲಾಲು ಪ್ರಸಾದ್ ಯಾದವ್ ಅವರಂತಹ ನಾಯಕರು ದೇಶದ ಅಭಿವೃದ್ಧಿಗಿಂತ ರಾಜಕೀಯದಲ್ಲಿ ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಸಾಧ್ಯತೆಯೇ ಹೆಚ್ಚು. 'ಗರಿಷ್ಠ ಪರಿವಾರ'ವೇ ಅವರ ಗುರಿಯಾಗಿದೆ ಎಂದು ಆರೋಪಿಸಿದರು.

ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಯಾವುದೇ ನೀತಿ ಅಥವಾ ಉದ್ದೇಶ ಅಥವಾ ನಾಯಕ ಇಲ್ಲ ಎಂದು ಅವರು ಹೇಳಿದರು.

SCROLL FOR NEXT