ನವದೆಹಲಿ: ಲೋಕಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆ ಕೇಳುವುದಕ್ಕೆ ಪ್ರತಿಯಾಗಿ ಭಾರಿ ಮೊತ್ತದ ಹಣ ಹಾಗೂ ದುಬಾರಿ ಉಡುಗೊರೆಗಳನ್ನು ಪಡೆದ ಆರೋಪ ಎದುರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆಗೆ ಸಂಬಂಧಿಸಿದ ನೈತಿಕ ಸಮಿತಿಯ ವರದಿಯನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಸಂಸದೀಯ ಮೂಲಗಳು ಗುರುವಾರ ತಿಳಿಸಿವೆ.
ನೈತಿಕ ಸಮಿತಿ ವರದಿಯನ್ನು ಈ ಹಿಂದೆ ಡಿಸೆಂಬರ್ 4 ರ ಲೋಕಸಭೆಯ ಕಾರ್ಯಸೂಚಿಯಲ್ಲಿ ಪಟ್ಟಿ ಮಾಡಲಾಗಿತ್ತು. ಆದರೆ ಅಂದು ಅದನ್ನು ಮಂಡಿಸಲಾಗಿಲ್ಲ.
ಮೊಯಿತ್ರಾ ಉಚ್ಚಾಟನೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಮುನ್ನ ಶಿಫಾರಸ್ಸುಗಳ ಕುರಿತು ಚರ್ಚೆಯಾಗಬೇಕು ಎಂದು ವಿವಿಧ ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದ್ದಾರೆ.
ವರದಿ ಮಂಡನೆಯಾದರೆ, ಎರಡೂವರೆ ನಿಮಿಷದಲ್ಲಿ ಕರಡು ಅಂಗೀಕರಿಸಿದ ನೈತಿಕ ಸಮತಿಯ ವರದಿಯ ಬಗ್ಗೆ ಪೂರ್ಣ ಪ್ರಮಾಣದ ಚರ್ಚೆಗೆ ಒತ್ತಾಯಿಸುತ್ತೇವೆ ಎಂದು ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿನೋದ್ ಕುಮಾರ್ ಸೋಂಕರ್ ನೇತೃತ್ವದ ಸಮಿತಿಯು ನವೆಂಬರ್ 9 ರಂದು ನಡೆದ ಸಭೆಯಲ್ಲಿ "ಪ್ರಶ್ನೆಗಾಗಿ ಲಂಚ ಪಡೆದ" ಆರೋಪದ ಮೇಲೆ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡುವ ವರದಿಯನ್ನು ಅಂಗೀಕರಿಸಿದೆ.