ದೇಶ

ವಿವಾಹಿತ ಪುತ್ರಿಯರೂ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗಕ್ಕೆ ಅರ್ಹರು: ಕಲ್ಕತ್ತಾ ಹೈಕೋರ್ಟ್

Ramyashree GN

ಕೋಲ್ಕತ್ತಾ: ವಿವಾಹಿತ ಪುತ್ರಿಯರು ಕೂಡ ತಂದೆಯ ಕುಟುಂಬದ ಕಡೆಯಿಂದ ಅನುಕಂಪದ ಆಧಾರದ ಮೇಲೆ ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಾಕ್ ಮತ್ತು ಶಬ್ಬರ್ ರಶೀದಿ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ಆದೇಶ ನೀಡಿದ್ದರೂ, ಆದೇಶದ ಪ್ರತಿ ಶನಿವಾರ ಬೆಳಿಗ್ಗೆ ಲಭ್ಯವಾಗಿದೆ.

ಸರ್ಕಾರಿ ಯೋಜನೆಗಾಗಿ ತನ್ನ ತಂದೆಯ ಒಡೆತನದ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪರಿಹಾರವಾಗಿ ಕೆಲಸ ಪಡೆಯಲು ರೇಖಾ ಪಾಲ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ಮೇಲಿನ ಪ್ರಕರಣದಲ್ಲಿ ಪೀಠವು ಈ ಆದೇಶವನ್ನು ನೀಡಿದೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ವೇಳೆ ಅವರು ವಿವಾಹವಾಗಿದ್ದ ಕಾರಣದಿಂದಾಗಿ ಪಶ್ಚಿಮ ಬಂಗಾಳ ಸರ್ಕಾರ ಅದನ್ನು ತಿರಸ್ಕರಿಸಿತ್ತು.

ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳ ಪವರ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನ ಯೋಜನೆಯಾದ ಬಕ್ರೇಶ್ವರ ಥರ್ಮಲ್ ಪವರ್ ಸ್ಟೇಷನ್‌ಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.

2012 ರಲ್ಲಿ, ರಾಜ್ಯ ಸರ್ಕಾರವು ಈ ಯೋಜನೆಗಾಗಿ ಭೂಮಿ ಸ್ವಾಧೀನಪಡಿಸಿಕೊಂಡ ಪ್ರತಿ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗವನ್ನು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಿತು. ಅದರಂತೆ ರೇಖಾ ಪಾಲ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಸಲ್ಲಿಸುವ ವೇಳೆಗೆ ಆಕೆಗೆ ವಿವಾಹವಾಗಿದ್ದ ಕಾರಣ ರಾಜ್ಯ ಸರ್ಕಾರ ಆ ಅರ್ಜಿಯನ್ನು ತಿರಸ್ಕರಿಸಿದೆ.

ಆಕೆಯು ತನ್ನ ಅರ್ಜಿಯನ್ನು ತಿರಸ್ಕರಿಸಿದ್ದರ ವಿರುದ್ಧ ಕಲ್ಕತ್ತಾ ಹೈಕೋರ್ಟ್‌‌ನ ಏಕಸದಸ್ಯ ಪೀಠದ ಮೆಟ್ಟಿಲೇರಿದ್ದರು. ತನ್ನ ತಂದೆಯ ಮರಣದ ನಂತರ, ತನ್ನ ತಾಯಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರಿಂದ, ತನಗೇ ಕೆಲಸವನ್ನು ನೀಡಬೇಕೆಂದು ವಾದಿಸಿದ್ದರು. ಆಕೆಯ ವಾದಕ್ಕೆ ಸಮ್ಮತಿ ಸೂಚಿಸಿದ ಏಕಸದಸ್ಯ ಪೀಠ, 2014ರಲ್ಲಿ ಆಕೆಗೆ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಆದರೆ, ರಾಜ್ಯ ಸರ್ಕಾರ ತಕ್ಷಣವೇ ಆ ಆದೇಶವನ್ನು ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತು. ಅಂತಿಮವಾಗಿ ಶುಕ್ರವಾರ ವಿಭಾಗೀಯ ಪೀಠವೂ ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿದೆ.

ರೇಖಾ ಪಾಲ್ ಅವರ ಪರ ವಕೀಲರು, ವಿಧವೆ ಅಥವಾ ವಿಚ್ಛೇದಿತ ಮಹಿಳೆಯನ್ನು ಅವರ ತಂದೆಯ ಕುಟುಂಬದ ಸದಸ್ಯರಾಗಿ ಪರಿಗಣಿಸಲು ಅರ್ಹರಾಗಿದ್ದರೆ, ವಿವಾಹಿತ ಮಹಿಳೆಗೆ ಅದು ಏಕೆ ಅನ್ವಯಿಸಬಾರದು? ಎಂದು ಪ್ರಶ್ನಿಸಿದರು.

SCROLL FOR NEXT