ದೇಶ

ಸಿಐಎಸ್‌ಎಫ್‌ಗೆ ಸಂಸತ್ ಕಟ್ಟಡ ಭದ್ರತೆ ಹಸ್ತಾಂತರಿಸಿದ ಸರ್ಕಾರ!

Nagaraja AB

ನವದೆಹಲಿ: ಸಂಸತ್ ಕಟ್ಟಡ ಸಂಕೀರ್ಣದ ಭದ್ರತೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ. ಇತ್ತೀಚಿಗೆ ನಡೆದ ಭದ್ರತಾ ಲೋಪ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

CISF ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಆಗಿದ್ದು, ಇದು ಪ್ರಸ್ತುತ ದೆಹಲಿಯಲ್ಲಿನ ಅನೇಕ ಕೇಂದ್ರ ಸರ್ಕಾರದ ಸಚಿವಾಲಯದ ಕಟ್ಟಡಗಳುಸ ಪರಮಾಣು ಮತ್ತು ಏರೋಸ್ಪೆಸ್ ಸ್ಥಳಗಳು, ವಿಮಾನ ನಿಲ್ದಾಣಗಳು ಮತ್ತು ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದೆ. 

ಕೇಂದ್ರ ಗೃಹ ಸಚಿವಾಲಯ ಸಂಸತ್ತಿನ ಕಟ್ಟಡ ಸಂಕೀರ್ಣದ ಸಮೀಕ್ಷೆಗೆ ಬುಧವಾರ ನಿರ್ದೇಶನ ನೀಡಿದ್ದು,  ಸಿಐಎಸ್‌ಎಫ್ ಭದ್ರತೆ ಮತ್ತು ಅಗ್ನಿಶಾಮಕ ದಳವನ್ನು ಸಮಗ್ರ ಮಾದರಿಯಲ್ಲಿ ನಿಯಮಿತವಾಗಿ ನಿಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. 

ಸಿಐಎಸ್‌ಎಫ್‌ನ ಸರ್ಕಾರಿ ಕಟ್ಟಡ ಭದ್ರತಾ (ಜಿಬಿಎಸ್) ಘಟಕದಿಂದ ಪಡೆದ ತಜ್ಞರು, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಅಗ್ನಿ ಶಾಮಕ  ಅಧಿಕಾರಿಗಳು ಮತ್ತು ಪ್ರಸ್ತುತ ಸಂಸತ್ತಿನ ಭದ್ರತಾ ತಂಡದ ಅಧಿಕಾರಿಗಳೊಂದಿಗೆ ಈ ವಾರದ ಕೊನೆಯಲ್ಲಿ ಸಮೀಕ್ಷೆ ಕೈಗೊಳ್ಳಲಿದ್ದಾರೆ.

ಹೊಸ ಮತ್ತು ಹಳೆಯ ಸಂಸತ್ತಿನ ಸಂಕೀರ್ಣ ಮತ್ತು ಅದರ ಸುತ್ತಮುತ್ತಲಿನ ಕಟ್ಟಡಗಳನ್ನು ಸಿಐಎಸ್‌ಎಫ್‌ನ ಸಮಗ್ರ ಭದ್ರತೆ ಅಡಿಯಲ್ಲಿ ತರಲಾಗುತ್ತಿದೆ. ಇದು ಸಂಸತ್ತಿನ ಭದ್ರತಾ ಸೇವೆ, ದೆಹಲಿ ಪೊಲೀಸ್ ಮತ್ತು ಸಿಐಎಸ್ ಎಫ್ ನ ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್ ನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT