ದೇಶ

ಮಹಾರಾಷ್ಟ್ರಕ್ಕೆ ಸಿಕ್ಕ ದೊಡ್ಡ ಗೆಲುವಿದು: ರಾಜ್ಯಪಾಲರ ನಿರ್ಗಮನಕ್ಕೆ ಆದಿತ್ಯ ಠಾಕ್ರೆ ಸಂತಸ

Manjula VN

ಮುಂಬೈ: ರಾಜ್ಯಪಾಲರ ಸ್ಥಾನಕ್ಕೆ ಭಗತ್ ಸಿಂಗ್ ಕೊಶ್ಯಾರಿ ರಾಜೀನಾಮೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಶಿವಸೇನೆ ಶಾಸಕ ಆದಿತ್ಯ ಠಾಕ್ರೆಯವರು, ಇದು ಮಹಾರಾಷ್ಟ್ರಕ್ಕೆ ಸಿಕ್ಕ ದೊಡ್ಡ ಗೆಲುವಾಗಿದೆ ಎಂದು ಭಾನುವಾರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಮಹಾರಾಷ್ಟ್ರಕ್ಕೆ ದೊಡ್ಡ ಗೆಲುವು. ಮಹಾರಾಷ್ಟ್ರ ವಿರೋಧಿ ರಾಜ್ಯಪಾಲರ ರಾಜೀನಾಮೆಯನ್ನು ಅಂತಿಮವಾಗಿ ಅಂಗೀಕರಿಸಲಾಗಿದೆ ಎಂದು ಹೇಳಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ, ನಮ್ಮ ಸಂವಿಧಾನ, ವಿಧಾನಸಭೆ ಮತ್ತು ಪ್ರಜಾಪ್ರಭುತ್ವದ ಆದರ್ಶಗಳನ್ನು ನಿರಂತರವಾಗಿ ಅವಮಾನಿಸಿದ ಅವರನ್ನು ರಾಜ್ಯಪಾಲರನ್ನಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಶ್ಯಾರಿಯವರ ಕೆಲವು ಹೇಳಿಕೆಗಳು ವಿವಾದವನ್ನು ಹುಟ್ಟುಹಾಕಿದ್ದವು. ಕಳೆದ ವರ್ಷ ನವೆಂಬರ್‍ ನಲ್ಲಿ ಸಾರ್ವಜನಿಕವಾಗಿ ಮಾತನಾಡಿದ್ದ ಕೊಶ್ಯಾರಿ ಅವರು, ಛತ್ರಪತಿ ಶಿವಾಜಿ ಅವರು ಹಳೆಯ ಕಾಲದ ಐಕಾನ್. ಡಾ.ಬಾಬಾಸಾಹೇಬ್ ಅಂಬೇಡ್ಕರ್‍ನಿಂದ ನಿತಿನ್ ಗಡ್ಕರಿಯಂತಹ ವ್ಯಕ್ತಿಗಳು ರಾಜ್ಯದ ಆಧುನಿಕ ಐಕಾನ್‍ಗಳು ಎಂದಿದ್ದರು.

ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ, ಕೊಶ್ಯಾರಿ ಅತಿಯಾಗಿ ಕ್ರಿಯಾಶೀಲರಾಗಿದ್ದರು. ರಾಜ್ಯ ಸರ್ಕಾರದ ಶಿಫಾರಸಿನ ಹೊರತಾಗಿಯೂ ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ 12 ಸ್ಥಾನಗಳನ್ನು ಭರ್ತಿ ಮಾಡಲು ಸಹಿ ಹಾಕಿರಲಿಲ್ಲ.

ಇದಕ್ಕೂ ಮೊದಲು 2019ರ ನವೆಂಬರ್‍'ನಲ್ಲಿ, ಬಿಜೆಪಿ-ಶಿವಸೇನೆ ನಡುವೆ ಬಿರುಕು ಮೂಡಿದ್ದ ಸಂದರ್ಭದಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಎನ್‍ಸಿಪಿಯ ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಮುಂಜಾನೆಯೇ ಪ್ರಮಾಣವಚನ ಬೋಧಿಸಿದ್ದರು. ಇದು ರಾಜಭವನದ ದುರ್ಬಳಕೆ ಕುರಿತು ಚರ್ಚೆಗಳನ್ನು ಹುಟ್ಟು ಹಾಕಿತ್ತು.

SCROLL FOR NEXT