ದೇಶ

ಅಂಗವಿಕಲರಿಗೆ ಡ್ರೋನ್ ಮೂಲಕ ಸರ್ಕಾರಿ ಪಿಂಚಣಿ ಹಣ ವಿತರಣೆ: ಒಡಿಶಾದಲ್ಲಿ ವಿನೂತನ ಕಾರ್ಯಕ್ರಮ

Srinivasamurthy VN

ನೌಪಾದಾ: ಒಡಿಶಾದ ದೂರದ ಗ್ರಾಮದಲ್ಲಿನ ಅಂಗವಿಕಲ ಫಲಾನುಭವಿಗೆ ಪಿಂಚಣಿ ವಿತರಣೆ ಮಾಡಲು ಡ್ರೋನ್ ಬಳಕೆ ಮಾಡಲಾಗಿದ್ದು ಹಲವರು ಇದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಹೌದು.. ಒಡಿಶಾದ ನುವಾಪಾದ ಜಿಲ್ಲೆಯ ದೂರದ ಹಳ್ಳಿಯೊಂದರ ದೈಹಿಕ ಅಂಗವಿಕಲ ಹೆತರಾಮ್ ಸತ್ನಾಮಿ ಅವರು ತಮ್ಮ ಸರ್ಕಾರಿ ಪಿಂಚಣಿ ಪಡೆಯಲು ಪ್ರತಿ ತಿಂಗಳು ದಟ್ಟವಾದ ಕಾಡಿನ ಮೂಲಕ 2 ಕಿ.ಮೀ. ನಡೆದು ಹೋಗಬೇಕಿತ್ತು. ಆದರೆ, ಈ ತಿಂಗಳು ಅವರು ಈ ಪರೀಕ್ಷೆ ಎದುರಿಸಬೇಕಾಗಿ ಬರಲಿಲ್ಲ, ಬದಲಿಗೆ ಪಿಂಚಣಿ ಹಣವೇ ತಮ್ಮ ಮನೆ ಬಾಗಿಲಿಗೆ ಬಂದಿತ್ತು. ಹಣವನ್ನು ಡ್ರೋನ್ ಸತ್ನಾಮಿ ಅವರ ಭಾಲೇಶ್ವರ ಪಂಚಾಯತ್ ವ್ಯಾಪ್ತಿಯ ಭೂತಕಪಾಡಾ ಗ್ರಾಮದ ಅವರ ಮನೆಗೆ ನೀಡಿತ್ತು.  

ಫಲಾನುಭವಿ ಸತ್ನಾಮಿ ಮುಗುಳ್ನಗುತ್ತಾ, ‘‘ಸರಪಂಚ್ ಅವರು ಡ್ರೋನ್ ಸಹಾಯದಿಂದ ಹಣ ಕಳುಹಿಸಿದ್ದಾರೆ. ದಟ್ಟಾರಣ್ಯದಿಂದ ಸುತ್ತುವರಿದಿರುವ ಗ್ರಾಮದಿಂದ ಪಂಚಾಯಿತಿ ಕಚೇರಿ 2 ಕಿ.ಮೀ ದೂರದಲ್ಲಿ ಇರುವುದರಿಂದ ನನಗೆ ಪಿಂಚಣಿ ಪಡೆಯುವುದು ಸವಾಲಿನ ಕೆಲಸವಾಗಿತ್ತು. ಆದರೆ ಡ್ರೋನ್ ಮೂಲಕ ಹಣ ಬಂದಿದ್ದು, ಇದು ದೊಡ್ಡ ಸಮಾಧಾನವಾಗಿದೆ ಎಂದು ಖುಷಿಯಿಂದ ಹೇಳಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ಸರಪಂಚ್ ಸರೋಜ್ ಅಗರ್ವಾಲ್ ಅವರು, ಸತ್ನಾಮಿ ಅವರು ಹುಟ್ಟಿನಿಂದಲೂ ಅಂಗವಿಕಲರಾಗಿದ್ದು ಪಿಂಚಣಿಗಾಗಿ ಅವರು ಪಡುತ್ತಿದ್ದ ಕಷ್ಟ ನೋಡುತ್ತಿದ್ದ ನನದೆ ಮರುಕವಾಗುತ್ತಿತ್ತು. ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ, ಅರಣ್ಯದಲ್ಲಿ ನೆಲೆಗೊಂಡಿರುವ ಗ್ರಾಮ ಭೂತಕಪದವಿದೆ. ದೈಹಿಕವಾಗಿ ಅಂಗವಿಕಲ ವ್ಯಕ್ತಿ ಹೇತಾರಾಮ್ ಸತ್ನಾಮಿ ಆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರು ಹುಟ್ಟಿನಿಂದಲೂ ನಡೆಯಲು ಸಾಧ್ಯವಿಲ್ಲ. "ನಾನು ಅವರನ್ನು ರಾಜ್ಯ ಯೋಜನೆಯಡಿ ಪಿಂಚಣಿಗಾಗಿ ದಾಖಲಿಸಿದ್ದೇನೆ. ಇತರ ದೇಶಗಳಲ್ಲಿ ಡ್ರೋನ್‌ಗಳ ಮೂಲಕ ವಸ್ತುಗಳನ್ನು ಹೇಗೆ ಕಳುಹಿಸಲಾಗುತ್ತದೆ ಎಂಬುದನ್ನು ನಾನು ನೋಡಿದ್ದೇನೆ. ಹಾಗಾಗಿ ನಾನು ಆನ್ಲೈನ್ ನಲ್ಲಿ ಡ್ರೋನ್‌ಗಾಗಿ ಆರ್ಡರ್ ಮಾಡಿ ಹಣವನ್ನು ಅವನ ಮನೆ ಬಾಗಿಲಿಗೆ ತಲುಪಿಸಿದೆ" ಎಂದು ಅವರು ಹೇಳಿದರು.

ನುವಾಪದ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ (ಬಿಡಿಒ) ಸುಬೇದಾರ್ ಪ್ರಧಾನ್ ಮಾತನಾಡಿ, ಸೇವೆಗಳನ್ನು ತಲುಪಿಸಲು ಅಂತಹ ಸಾಧನಗಳನ್ನು ಖರೀದಿಸಲು ಸರ್ಕಾರವು ನಿಬಂಧನೆ ಹೊಂದಿಲ್ಲದ ಕಾರಣ ಅಗರ್‌ವಾಲ್ ಅವರ ಸ್ವಂತ ಉಪಕ್ರಮದಿಂದ ಇದು ಸಾಧ್ಯವಾಯಿತು. ಔಷಧಿ, ಪಾರ್ಸೆಲ್‌ಗಳು, ದಿನಸಿ ಮತ್ತು ಆಹಾರ ಸೇರಿದಂತೆ ವಿವಿಧ ಸರಕುಗಳನ್ನು ತಲುಪಿಸಲು ಪ್ರಪಂಚದಾದ್ಯಂತ ಡ್ರೋನ್‌ಗಳನ್ನು ಬಳಸಲಾಗುತ್ತಿದೆ, ಆದರೆ ಭಾರತದಲ್ಲಿಯೂ ಸಹ ನಗದು ವಿತರಣೆಯು ಈ ರೀತಿಯ ಮೊದಲ ಉಪಕ್ರಮವಾಗಿದೆ ಎಂದು ಹೇಳಿದ್ದಾರೆ.

SCROLL FOR NEXT