ನವದೆಹಲಿ: ದೇಶದ ಅತ್ಯಂತ ಆಳವಾದ ಜಲ ಪ್ರದೇಶದಲ್ಲಿ ರಕ್ಷಣಾ ಕಾರ್ಯವನ್ನು ಕೈಗೊಂಡಿದ್ದಕ್ಕಾಗಿ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಸೋಮವಾರ ಐಎನ್‌ಎಸ್ ನಿರೀಕ್ಷಕ್‌ಗೆ 'ಸ್ಥಳದಲ್ಲೇ' ಯುನಿಟ್ ಸಿಟೇಶನ್ ಪ್ರಶಸ್ತಿ ಪ್ರದಾನ ಮಾಡಿದರು. ನೌಕಾಪಡೆಯ ಮುಖ್ಯಸ್ಥ ಅಡ್ಮೀರಲ್ ಆರ್ ಹರಿ ಕುಮಾರ್ ಸೋಮವಾರ ಕೊಚ್ಚಿಯಲ್ಲಿ ಐಎನ್‌ಎಸ್ ನಿರೀಕ್ಷಕ್‌ಗೆ ಭೇಟಿ ನೀಡಿದರು.
ನೌಕಪಡೆಯ ಮುಖ್ಯಸ್ಥರು ಅರೇಬಿಯನ್ ಸಮುದ್ರದಲ್ಲಿ 219 ಮೀಟರ್ ಆಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಹಡುಗಿನ ಮುಳುಗು ತಂಡದೊಂದಿಗೆ ಸಂವಾದ ನಡೆಸಿದ್ದು, ಅಂತಹ ಸವಾಲಿನ ಸಂದರ್ಭಗಳಲ್ಲಿ ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ ಎಂದು ಭಾರತೀಯ ನೌಕಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಹಡಗಿನ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ನೌಕಪಡೆ ಮುಖ್ಯಸ್ಥರು, ಆಳವಾದ ಪ್ರದೇಶದಲ್ಲಿ ಡೈವಿಂಗ್ ರಕ್ಷಣಾ ಕಾರ್ಯಾಚರಣೆಯ ಪ್ರಯತ್ನವನ್ನು ಕೊಂಡಾಡಿದರು. ಐಎನ್ ಎಸ್ ನಿರೀಕ್ಷಕ್ ಇತ್ತೀಚಿಗೆ ಗುಜರಾತ್ ಕರಾವಳಿಯಲ್ಲಿ ಗಂಭೀರವಾದ ಕಾರ್ಯಾಚರಣೆಯೊಂದನ್ನು ಪೂರ್ಣಗೊಳಿಸಿತ್ತು. ಐಎನ್ ಎಸ್ ನಿರೀಕ್ಷಕ್ ಸಬ್‌ಮೆರೀನ್ ಪಾರುಗಾಣಿಕಾ ನೌಕೆಯಾಗಿದೆ. 1985ರಲ್ಲಿ ಮಜಗಾಂವ್ ಹಡಗು ನಿರ್ಮಾಣ ಘಟಕ ನಿರ್ಮಿಸಿದ ಈ ಹಡಗು 1989 ರಿಂದ ನೌಕಾಪಡೆಯೊಂದಿಗೆ ಸೇವೆಯಲ್ಲಿದೆ.