ದೇಶ

ಭಾರತ್ ಜೋಡೋ ಯಾತ್ರೆ: ರಾಹುಲ್ ಜೊತೆಗೆ ''ರಾ'' ಮಾಜಿ ಮುಖ್ಯಸ್ಥ ಹೆಜ್ಜೆ

Nagaraja AB

ನವದೆಹಲಿ: ಚಳಿಗಾಲದಿಂದ ತಾತ್ಕಾಲಿಕವಾಗಿ ವಿರಾಮ ಪಡೆದುಕೊಂಡಿದ್ದ ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ ಯಾತ್ರೆ' ಪುನರ್ ಆರಂಭವಾಗಿದೆ. ರಾಹುಲ್ ಗಾಂಧಿ ಅವರೊಂದಿಗೆ ಬೇಹುಗಾರಿಕಾ ಸಂಸ್ಥೆ  'ರಾ' ಮಾಜಿ ಮುಖ್ಯಸ್ಥ ಎಎಸ್ ದುಲಾತ್ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶ ಪ್ರವೇಶಕ್ಕೂ ಮುನ್ನಾ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು. 

ಎಎಸ್ ದುಲಾತ್ ಭಾರತೀಯ ಗುಪ್ತಚರ ಸಂಸ್ಥೆಯ ಮಾಜಿ ವಿಶೇಷ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸೇವೆಯಿಂದ ನಿವೃತ್ತರಾದ ಬಳಿಕ ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ ಜಮ್ಮು-ಕಾಶ್ಮೀರ ವಿಶೇಷ ಸಲಹೆಗಾರರಾಗಿ ಜನವರಿ 2000ದಿಂದ ಮೇ 2004ರವರೆಗೂ ಕಾರ್ಯ ನಿರ್ವಹಿಸಿದ್ದರು. 

ಒಂಬತ್ತು ದಿನಗಳ ವಿರಾಮದ ನಂತರ ಪುನರ್ ಆರಂಭವಾದ ಯಾತ್ರೆಯಲ್ಲಿ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡಾ ಭಾಗವಹಿಸಿದರು. ಭಾರತ್ ಜೋಡೋ ಯಾತ್ರೆ ಇಂದು ಮಧ್ಯಾಹ್ನ ಉತ್ತರ ಪ್ರದೇಶಕ್ಕೆ ಆಗಮಿಸಿತು. ಲೊನಿ ಗಡಿಯಲ್ಲಿ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಯಾತ್ರೆಗೆ ಸ್ವಾಗತ ಕೋರಿದರು.

ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶದಿಂದ ಜನವರಿ 6ಕ್ಕೆ ಹರಿಯಾಣ ತಲುಪಲಿದೆ. ಜನವರಿ 10ರವರೆಗೂ ಹರಿಯಾಣದಲ್ಲಿರುವ ಯಾತ್ರೆ  ಜನವರಿ 11 ರಿಂದ 20ರವರೆಗೂ ಪಂಜಾಬ್, ಜನವರಿ 19 ರಂದು ಹಿಮಾಚಲ ಪ್ರದೇಶ ಹಾಗೂ ಜನವರಿ 20 ರಂದು ಜಮ್ಮು-ಕಾಶ್ಮೀರಕ್ಕೆ ತಲುಪಲಿದೆ. ಜನವರಿ 30 ರಂದು ಶ್ರೀನಗರದಲ್ಲಿ ರಾಷ್ಟ್ರ ಧ್ವಜಾರೋಹಣದೊಂದಿಗೆ ಭಾರತ್ ಜೋಡೋ ಯಾತ್ರೆ ಅಂತ್ಯವಾಗಲಿದೆ.

SCROLL FOR NEXT