ದೇಶ

ಗುಜರಾತ್‌: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ; 39 ವರ್ಷದ ವ್ಯಕ್ತಿಯ ಬಂಧನ

Ramyashree GN

ಅಹಮದಾಬಾದ್: ಗುಜರಾತ್‌ನ ಬೊಟಾಡ್ ನಗರದಲ್ಲಿ ವ್ಯಕ್ತಿಯೊಬ್ಬ ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಭಗವಾನ್‌ಪಾರಾ ಪ್ರದೇಶದ ನಿರ್ಜನ ಸ್ಥಳದಲ್ಲಿ ಶವವನ್ನು ಎಸೆದಿರುವುದು ಕಂಡುಬಂದಿದೆ. ನಂತರ ಸ್ಥಳೀಯರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ರಸ್ತೆಗಳನ್ನು ತಡೆದರು ಎಂದು ಅವರು ಹೇಳಿದರು.

ಡೈಮಂಡ್ ಪಾಲಿಷರ್ ಆಗಿ ಕೆಲಸ ಮಾಡುತ್ತಿದ್ದ 39 ವರ್ಷದ ವ್ಯಕ್ತಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲೆ ಮಾಡುವ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂಬುದು ತಿಳಿದುಬಂದಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಮಹರ್ಷಿ ರಾವಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 302 (ಕೊಲೆ) ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಬೊಟಾಡ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಪರಾಧ ವಿಭಾಗ ಮತ್ತು ವಿಶೇಷ ಕಾರ್ಯಾಚರಣೆ ಗುಂಪಿನ ಸಿಬ್ಬಂದಿ ಸೇರಿದಂತೆ ವಿವಿಧ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಆರೋಪಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಲು ನಾವು ವಿಧಿವಿಜ್ಞಾನ ತಂಡದ ನೆರವನ್ನು ಪಡೆಯುತ್ತಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ ಎಂದು ರಾವಲ್ ಹೇಳಿದರು.

ಆರೋಪಿಯು ಬೊಟಾಡ್ ಪಟ್ಟಣದ ಶಿವನಗರದ ನಿವಾಸಿ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಬಂಧಿತ ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾವಲ್ ಹೇಳಿದ್ದಾರೆ.

SCROLL FOR NEXT