ದೇಶ

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ ಮುಖಾಮುಖಿ; ಕೆಲಕಾಲ ಮಾತುಕತೆ

Ramyashree GN

ನವದೆಹಲಿ: ಮುಂಗಾರು ಅಧಿವೇಶನದ ಮೊದಲ ದಿನವಾದ ಗುರುವಾರ ಲೋಕಸಭೆಯ ಸಭಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮುಖಾಮುಖಿಯಾದರು. ಈ ವೇಳೆ ಅವರು ಕೆಲಕಾಲ ಮಾತುಕತೆ ನಡೆಸಿದರು.

ಅಧಿವೇಶನದ ಮೊದಲ ದಿನ ಸದನಕ್ಕೆ ಆಗಮಿಸಿದ ಮೋದಿ ಅವರು, ಕಲಾಪ ಆರಂಭವಾಗುವ ಮುನ್ನವೇ ವಿವಿಧ ನಾಯಕರಿಗೆ ಶುಭಾಶಯ ಕೋರಿದರು.

ಈ ವೇಳೆ ಪ್ರತಿಪಕ್ಷ ನಾಯಕರ ಸ್ಥಾನಕ್ಕೆ ತಲುಪಿದ ಅವರು, ಸೋನಿಯಾ ಗಾಂಧಿಯವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.

ಸಂಸತ್ ಅಧಿವೇಶನದ ಮೊದಲ ದಿನ ನಾಯಕರು ಪರಸ್ಪರ ಶುಭಾಶಯ ಕೋರುವುದು ವಾಡಿಕೆ.

ಇದಕ್ಕೂ ಮುನ್ನ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿದ ಘಟನೆಯು 140 ಕೋಟಿ ಭಾರತೀಯರು ನಾಚಿಕೆ ಪಡುವಂತದ್ದು. ಕಾನೂನು ತನ್ನ ಸಂಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತದೆ ಮತ್ತು ಘಟನೆಯಲ್ಲಿನ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಹೇಳಿದರು. 

ಈಶಾನ್ಯ ರಾಜ್ಯದಲ್ಲಿನ ಜನಾಂಗೀಯ ಹಿಂಸಾಚಾರದ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ ಎನ್ನುವ ವಿರೋಧ ಪಕ್ಷಗಳ ಟೀಕೆಗಳ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ, 'ನನ್ನ ಹೃದಯವು ನೋವು ಮತ್ತು ಕೋಪದಿಂದ ತುಂಬಿದೆ' ಎಂದು ತಿಳಿಸಿದರು.

SCROLL FOR NEXT