ದೇಶ

ಸಿಸೋಡಿಯಾ ಮಧ್ಯಂತರ ಜಾಮೀನು ಅರ್ಜಿ: ನಾಳೆ ತೀರ್ಪು ಪ್ರಕಟಿಸಲಿರುವ ಹೈಕೋರ್ಟ್

Nagaraja AB

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರು ವಾರಗಳ ಮಧ್ಯಂತರ ಜಾಮೀನು ಕೋರಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಸಲ್ಲಿಸಿರುವ ಮನವಿಯ ಕುರಿತು ದೆಹಲಿ ಹೈಕೋರ್ಟ್ ಸೋಮವಾರ ತನ್ನ ಆದೇಶವನ್ನು ಪ್ರಕಟಿಸಲಿದೆ.

ತಮ್ಮ ಅನಾರೋಗ್ಯ ಪೀಡಿತ ಪತ್ನಿಯನ್ನು ನಾನೊಬ್ಬನೇ ನೋಡಿಕೊಳ್ಳಬೇಕಾಗಿರುವುದರಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡುವಂತೆ ದೆಹಲಿ ಮಾಡಿ ಉಪ ಮುಖ್ಯಮಂತ್ರಿ ಕೋರಿದ್ದಾರೆ. ಈ ಪ್ರಕರಣದಲ್ಲಿ ನಿಯಮಿತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ  ಬಾಕಿ ಇದೆ.

ಮಾರ್ಚ್ 9 ರಂದು ಬಂಧನಕ್ಕೊಳಗಾಗಿದ್ದ ಸಿಸೋಡಿಯಾ, ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣದಲ್ಲಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಧ್ಯಂತರ ಜಾಮೀನು ಅರ್ಜಿಯ ತೀರ್ಪನ್ನು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ಪ್ರಕಟಿಸಲಿದ್ದಾರೆ.

ಮನೀಷ್ ಸಿಸೋಡಿಯಾ ಅವರ ಮಧ್ಯಂತರ ಜಾಮೀನು ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿರುವ ದೆಹಲಿ ಹೈಕೋರ್ಟ್, ಸಿಸೋಡಿಯಾ ಅವರ ಪತ್ನಿಯ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ಶನಿವಾರ ಸೂಚಿಸಿತ್ತು. ಅನಾರೋಗ್ಯ ಪೀಡಿತ ಪತ್ನಿಯ ಆರೈಕೆ ಮಾಡಲು ಮಧ್ಯಂತರ ಜಾಮೀನು ನೀಡುವಂತೆ ಕೋರಿ ಸಿಸೋಡಿಯಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

SCROLL FOR NEXT