ದೇಶ

ನವಿ ಮುಂಬೈ: ಸಾಮಾಜಿಕ ಜಾಲತಾಣ ಪ್ರೊಫೈಲ್ ಗೆ ಔರಂಗಜೇಬ್ ಚಿತ್ರ; ವ್ಯಕ್ತಿಯ ಬಂಧನ

Srinivas Rao BV

ಮುಂಬೈ: ಮುಘಲ್ ವಂಶಸ್ಥ ಔರಂಗಜೇಬ್ ನ ಫೋಟೋವನ್ನು ವಾಟ್ಸ್ ಆಪ್ ಪ್ರೊಫೈಲ್ ಫೋಟೋವನ್ನಾಗಿ ಅಪ್ ಲೋಡ್ ಮಾಡಿದ್ದ ನವಿ ಮುಂಬೈ ನ ವ್ಯಕ್ತಿಯನ್ನು ಬಂಧಿಸಲಾಗಿದೆ. 

ಔರಂಗಜೇಬ್ ಫೋಟೊ ಹಾಕಿದ್ದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಸಂಘಟನೆಗಳು ದೂರನ್ನೂ ದಾಖಲಿಸಿದ್ದವು. ದೂರಿನ ಆಧಾರದಲ್ಲಿ ವಶಿ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆತನಿಗೆ ನೊಟೀಸ್ ನ್ನು ಜಾರಿಗೊಳಿಸಲಾಗಿದೆ. 

ಹಿಂದೂ ಸಂಘಟನೆಗಳು ಪ್ರೊಫೈಲ್ ಫೋಟೊದಲ್ಲಿ ಔರಂಗಜೇಬ್ ನ ಫೋಟೋ ಇರುವ ದಾಖಲೆಯನ್ನು ಪೊಲೀಸರಿಗೆ ನೀಡಿದ್ದು, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ) 153-A (ಧರ್ಮ, ಜನಾಂಗ, ಜನ್ಮ ಸ್ಥಳ, ನಿವಾಸದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆಸ್ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಔರಂಗಜೇಬ್ ಹಾಗೂ ಟಿಪ್ಪು ಸುಲ್ತಾನ್ ನ್ನು ವೈಭವಿಕರಿಸಿದ್ದರ ಪರಿಣಾಮ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಕೋಮು ಘರ್ಷಣೆಯ ಪರಿಸ್ಥಿತಿಯ ಘಟನೆಗಳು ವರದಿಯಾಗಿದ್ದವು. 

ಕೊಲ್ಹಾಪುರ ನಗರದಲ್ಲಿ ಕೆಲವು ಸ್ಥಳೀಯರು ಟಿಪ್ಪು ಸುಲ್ತಾನ್ ಚಿತ್ರವನ್ನು ಆಕ್ಷೇಪಾರ್ಹ ಆಡಿಯೋ ಮೆಸೇಜ್ ನೊಂದಿಗೆ ಪ್ರಕಟಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿತ್ತು,

ಇದಕ್ಕೂ ಮುನ್ನ ಅಹ್ಮದ್‌ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಔರಂಗಜೇಬನ ಫೋಟೋಗಳನ್ನು ಪ್ರದರ್ಶಿಸಲಾಗಿತ್ತು. ಸಂಗಮನೇರ್ ಪಟ್ಟಣದಲ್ಲಿ, ಬಾಲಕನ ಹತ್ಯೆಗೆ ಪ್ರತಿಯಾಗಿ ಸಕಲ್ ಹಿಂದೂ ಸಮಾಜದ ರ್ಯಾಲಿಯಲ್ಲಿ ಕಲ್ಲು ತೂರಾಟ ನಡೆದು. ಇಬ್ಬರು ಗಾಯಗೊಂಡು, 5 ವಾಹನಗಳಿಗೆ ಹಾನಿಯಾಗಿತ್ತು. ಪ್ರತ್ಯೇಕ ಘಟನೆಯೊಂದರಲ್ಲಿ, ಸಂಗಮ್ನೇರ್‌ನಲ್ಲಿ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಆಕ್ಷೇಪಾರ್ಹ ಘೋಷಣೆಗಳೊಂದಿಗೆ ಔರಂಗಜೇಬನ ಪೋಸ್ಟರ್ ನ್ನು ಪ್ರದರ್ಶಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT