ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಮದ್ಯದ ಉದ್ಯಮಿ ಬಂಧಿಸಿದ ಇ.ಡಿ

Ramyashree GN

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮದ್ಯದ ಉದ್ಯಮಿ, ಬ್ರಿಂದ್ಕೋ ಸೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಮನದೀಪ್ ಧಾಲ್ ಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಅವರ ವಿಚಾರಣೆಯ ನಂತರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಧಾಲ್ ಅವರನ್ನು ಬುಧವಾರ ರಾತ್ರಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಅವರನ್ನು ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ. ಅಲ್ಲಿ ಇ.ಡಿ ಮತ್ತೆ ಅವರನ್ನು ಕಸ್ಟಡಿಗೆ ಕೋರಲಿದೆ.

ಸಿಬಿಐ ಎಫ್‌ಐಆರ್ ಪ್ರಕಾರ, ಎಎಪಿ ಕಾರ್ಯನಿರ್ವಾಹಕ ವಿಜಯ್ ನಾಯರ್, ಮನೋಜ್ ರೈ, ಅಮನದೀಪ್ ಧಾಲ್ ಮತ್ತು ಸಮೀರ್ ಮಹಂದ್ರು ಅವರು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಿಬಿಐ ಎಫ್‌ಐಆರ್‌ ಬಳಿಕ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಇಲ್ಲಿಯವರೆಗೆ, ಇ.ಡಿ ಈ ಪ್ರಕರಣದಲ್ಲಿ ಎರಡು ಆರೋಪಪಟ್ಟಿ ಅಥವಾ ಪ್ರಾಸಿಕ್ಯೂಷನ್ ದೂರುಗಳನ್ನು ಸಲ್ಲಿಸಿದೆ ಮತ್ತು ಧಾಲ್ ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಅಬಕಾರಿ ನೀತಿಯನ್ನು ರದ್ದುಗೊಳಿಸಲಾಯಿತು ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ಮದ್ಯದ ವ್ಯಾಪಾರಿಗಳು ಮಾಡಿರುವ ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಕೇಳಿದರು.

ಈ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ (ಫೆ.26) ಬಂಧಿಸಿದೆ.

SCROLL FOR NEXT