ದೇಶ

ದೆಹಲಿಯ ಶಾಸಕರು ಮತ್ತು ಸಚಿವರ ವೇತನ ಶೇ 66 ರಷ್ಟು ಹೆಚ್ಚಳ, ಒಪ್ಪಿಗೆ ಸೂಚಿಸಿದ ರಾಷ್ಟ್ರಪತಿಗಳು

Ramyashree GN

ನವದೆಹಲಿ: ಮಾರ್ಚ್ 17 ರಿಂದ ಪ್ರಾರಂಭವಾಗಲಿರುವ ದೆಹಲಿ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ, ಶಾಸಕರು ಮತ್ತು ಸಚಿವರ ಸಂಬಳ ಮತ್ತು ಭತ್ಯೆಗಳನ್ನು ಶೇ 66ಕ್ಕಿಂತ ಜಾಸ್ತಿ ಹೆಚ್ಚಿಸಲಾಗಿದೆ.

ದೆಹಲಿ ಸರ್ಕಾರದ ಕಾನೂನು ಇಲಾಖೆಯ ಅಧಿಸೂಚನೆಯ ಪ್ರಕಾರ, ಶಾಸಕರು ಈಗ ಪ್ರತಿ ತಿಂಗಳು 90,000 ರೂ. ಗಳನ್ನು ಪಡೆಯುತ್ತಾರೆ. ಈ ಹಿಂದೆ 54,000 ರೂ. ಪಡೆಯುತ್ತಿದ್ದರು.

ಅಧಿಸೂಚನೆಯ ಪ್ರಕಾರ, ಮುಖ್ಯಮಂತ್ರಿ ಮತ್ತು ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕ ಮತ್ತು ವಿರೋಧ ಪಕ್ಷದ ನಾಯಕರ ವೇತನ ಮತ್ತು ಭತ್ಯೆಗಳನ್ನು ತಿಂಗಳಿಗೆ 72,000 ರೂ.ಗಳಿಂದ 1,70,000 ರೂ.ಗೆ ಹೆಚ್ಚಿಸಲಾಗಿದೆ.

ಶಾಸಕರ ಮೂಲ ವೇತನ ಮಾಸಿಕ 12 ಸಾವಿರದಿಂದ 30 ಸಾವಿರಕ್ಕೆ ಹಾಗೂ ಸಚಿವರ ಮೂಲ ವೇತನ ಮಾಸಿಕ 20 ಸಾವಿರದಿಂದ 60 ಸಾವಿರಕ್ಕೆ ಏರಿಕೆಯಾಗಿದೆ. ದಿನಭತ್ಯೆ ಕೂಡ 1000 ರೂ. ನಿಂದ 1500 ರೂ.ಗೆ ಏರಿಕೆಯಾಗಿದೆ.

2022ರ ಜುಲೈನಲ್ಲಿ, ದೆಹಲಿ ವಿಧಾನಸಭೆಯು ಶಾಸಕರು ಮತ್ತು ಸಚಿವರ ವೇತನವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಅಂಗೀಕರಿಸಿತು. ಈ ಪ್ರಸ್ತಾವನೆಗೆ ರಾಷ್ಟ್ರಪತಿಗಳ ಒಪ್ಪಿಗೆ ದೊರೆತ ಬಳಿಕ ಕಾನೂನು ಇಲಾಖೆ ವೇತನ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸಿದೆ.

ಶಾಸಕರ ವೇತನ ಹೆಚ್ಚಳ ಫೆಬ್ರುವರಿ 14 ರಿಂದಲೇ ಜಾರಿಗೆ ಬರಲಿದ್ದು, ರಾಷ್ಟ್ರಪತಿಗಳು ಈ ಕ್ರಮಕ್ಕೆ ಒಪ್ಪಿಗೆ ನೀಡಿದ್ದಾರೆ.

SCROLL FOR NEXT