ದೇಶ

ಮಹಾರಾಷ್ಟ್ರ: ರಕ್ಷಣಾ ಕಾರ್ಯಾಚರಣೆ ವಿಫಲ, ಬೋರ್‌ವೆಲ್‌ಗೆ ಬಿದ್ದಿದ್ದ 5 ವರ್ಷದ ಬಾಲಕ ಸಾವು

Ramyashree GN

ಪುಣೆ: ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೋರ್‌ವೆಲ್‌ಗೆ ಬಿದ್ದ ಐದು ವರ್ಷದ ಬಾಲಕನನ್ನು ರಕ್ಷಿಸಲು ನಡೆದ ಕನಿಷ್ಠ ಒಂಬತ್ತು ಗಂಟೆಗಳ ರಕ್ಷಣಾ ಕಾರ್ಯಾಚರಣೆಯು ನಿಷ್ಪ್ರಯೋಜಕವಾಗಿದೆ. ಮಂಗಳವಾರ ನಸುಕಿನ ವೇಳೆಯಲ್ಲಿ ಬಾಲಕನ ಮೃತ ದೇಹವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತನನ್ನು ಸಾಗರ್ ಬರೇಲಾ ಎಂದು ಗುರುತಿಸಲಾಗಿದ್ದು, ಮಧ್ಯಪ್ರದೇಶದ ಬುರ್ಹಾನ್‌ಪುರದ ಕಬ್ಬು ಕಾರ್ಮಿಕನ ಪುತ್ರ.

ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಪುಣೆ ನಗರದಿಂದ 125 ಕಿಮೀ ದೂರದಲ್ಲಿರುವ ಕರ್ಜತ್ ತಹಸಿಲ್ ವ್ಯಾಪ್ತಿಯ ಕೊಪರ್ಡಿ ಗ್ರಾಮದಲ್ಲಿ ಎತ್ತಿನ ಬಂಡಿಯಿಂದ ಇಳಿದ ಸ್ವಲ್ಪ ಸಮಯದ ನಂತರ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಸಿಬ್ಬಂದಿಗಳೊಂದಿಗೆ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. 

ಮಂಗಳವಾರ ನಸುಕಿನ 2 ಗಂಟೆ ಸುಮಾರಿಗೆ ಬಾಲಕನನ್ನು ಬೋರ್‌ವೆಲ್‌ನಿಂದ ಹೊರತೆಗೆಯಲಾಯಿತು. ನಿಷ್ಕ್ರಿಯಗೊಂಡ ಬೋರ್‌ವೆಲ್‌ನಲ್ಲಿ ಬಾಲಕ 15 ಅಡಿ ಆಳದಲ್ಲಿ ಸಿಲುಕಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈತರು ತಮ್ಮ ಹೊಲಗಳಲ್ಲಿನ ಬೋರ್‌ವೆಲ್‌ಗಳನ್ನು ಸರಿಯಾಗಿ ಮುಚ್ಚಲು ಕಾಳಜಿ ವಹಿಸಬೇಕು ಎಂದು ಕರ್ಜತ್-ಜಮಖೇಡ್ ಶಾಸಕ ರೋಹಿತ್ ಪವಾರ್ ಹೇಳಿದರು.

'ನನ್ನ ಕ್ಷೇತ್ರದಲ್ಲಿ ಬೋರ್‌ವೆಲ್‌ಗೆ ಬಿದ್ದು ಕೂಲಿ ಕಾರ್ಮಿಕನ ಮಗು ಮೃತಪಟ್ಟಿರುವ ಘಟನೆ ಅತ್ಯಂತ ದುರದೃಷ್ಟಕರ. ಎಷ್ಟೇ ಪ್ರಯತ್ನಿಸಿದರೂ ಆತನನ್ನು ರಕ್ಷಿಸಲಾಗಲಿಲ್ಲ. ಆದರೆ ಅಂತಹ ಘಟನೆಗಳನ್ನು ತಪ್ಪಿಸಲು, ರೈತರು ತಮ್ಮ ಹೊಲಗಳಲ್ಲಿನ ಕೊಳವೆ ಬಾವಿಗಳನ್ನು ಸರಿಯಾಗಿ ಮುಚ್ಚಲು ಕಾಳಜಿ ವಹಿಸಬೇಕು' ಎಂದು ಪವಾರ್ ಟ್ವೀಟ್ ಮಾಡಿದ್ದಾರೆ.

SCROLL FOR NEXT