ದೇಶ

ಲಂಡನ್‌ನಲ್ಲಿ ರಾಹುಲ್ ಗಾಂಧಿ ಹೇಳಿಕೆ: ಗದ್ದಲದ ನಡುವೆ ಲೋಕಸಭೆ ಕಲಾಪ ಮುಂದೂಡಿಕೆ

Ramyashree GN

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರಿಟನ್‌ನಲ್ಲಿ ಮಾಡಿದ 'ಪ್ರಜಾಪ್ರಭುತ್ವ ದಾಳಿಗೆ ಒಳಗಾಗಿದೆ' ಎಂಬ ಹೇಳಿಕೆಗಳ ವಿರುದ್ಧ ಪ್ರತಿಪಕ್ಷಗಳು ಮತ್ತು ಸದನದ ಮುಂಭಾಗದ ಪೀಠಗಳ ಘೋಷಣೆಗಳ ನಡುವೆ ಲೋಕಸಭೆಯ ಕಲಾಪವನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಸದನ ಆರಂಭವಾಗುತ್ತಿದ್ದಂತೆ, ವಿರೋಧ ಪಕ್ಷದ ಸದಸ್ಯರು ತಮ್ಮ ಕೈಯಲ್ಲಿ ಕೆಲವು ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಅದಾನಿ ಗ್ರೂಪ್‌ನ ಆಪಾದಿತ ಸ್ಟಾಕ್ ಮ್ಯಾನಿಪುಲೇಷನ್ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸಿದರು.

ಈ ವೇಳೆ ಸದನದ ಮುಂಭಾಗದ ಪೀಠಗಳ ಸದಸ್ಯರು ರಾಹುಲ್ ಗಾಂಧಿಯವರ ಟೀಕೆಗಳಿಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಪ್ರತಿ ಘೋಷಣೆಗಳನ್ನು ಕೂಗಿದರು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪಕ್ಕೆ ಅವಕಾಶ ನೀಡುವಂತೆ ಸದಸ್ಯರನ್ನು ಪದೇ ಪದೇ ಒತ್ತಾಯಿಸಿದರು. ಸದಸ್ಯರು ಪಟ್ಟು ಬಿಡದ ಕಾರಣ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಇಂಗ್ಲೆಂಡ್ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು, ಭಾರತೀಯ ಪ್ರಜಾಪ್ರಭುತ್ವದ ರಚನೆಗಳು ಕ್ರೂರ ದಾಳಿಗೆ ಒಳಗಾಗಿವೆ ಮತ್ತು ದೇಶದ ಸಂಸ್ಥೆಗಳ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆದಿದೆ. ಅಮೆರಿಕ ಮತ್ತು ಯುರೋಪ್‌ನಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಇದನ್ನು ಗಮನಿಸುವಲ್ಲಿ ವಿಫಲವಾಗಿವೆ' ಎಂದು ಆರೋಪಿಸಿದ್ದರು.

ಈ ಹೇಳಿಕೆಗಳು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಅವರು ವಿದೇಶಿ ನೆಲದಲ್ಲಿ ಭಾರತವನ್ನು ದೂಷಿಸಿದ್ದಾರೆ ಮತ್ತು ವಿದೇಶಿ ಹಸ್ತಕ್ಷೇಪಗಳನ್ನು ಬಯಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಆಂತರಿಕ ರಾಜಕೀಯವನ್ನು ಎತ್ತುವ ಉದಾಹರಣೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಆಡಳಿತ ಪಕ್ಷಕ್ಕೆ ತಿರುಗೇಟು ನೀಡಿದೆ.

SCROLL FOR NEXT