ದೇಶ

ಲಂಚದ ಆಮಿಷ: ಡಿಸೈನರ್ ವಿರುದ್ಧ ದೂರು ದಾಖಲಿಸಿದ ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ಪತ್ನಿ!

Srinivas Rao BV

ನವದೆಹಲಿ: ತಮಗೆ ಲಂಚದ ಆಮಿಷವೊಡ್ಡಲು ಬಂದಿದ್ದ ಡಿಸೈನರ್ ವಿರುದ್ಧ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಪೊಲೀಸರಿಗೆ ದೂರು ನೀಡಿದ್ದಾರೆ. 

ಕ್ರಿಮಿನಲ್ ಪ್ರಕರಣವೊಂದರಲ್ಲಿ ಮಧ್ಯಪ್ರವೇಶಿಸುವುದಕ್ಕಾಗಿ ಆ ಡಿಸೈನರ್ ಅಮೃತಾ ಫಡ್ನವೀಸ್ ಗೆ ಲಂಚದ ಆಮಿಷವೊಡ್ಡಿದ್ದಷ್ಟೇ ಅಲ್ಲದೇ ಅಮೃತಾ ಫಡ್ನವೀಸ್ ಅವರಿಗೇ ಬೆದರಿಕೆ ಹಾಕಲೂ ಮುಂದಾಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಅಮೃತಾ ಫಡ್ನವೀಸ್ ದೂರಿನ ಆಧಾರದಲ್ಲಿ ಮಲಬಾರ್ ಹಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಿಕ್ಷಾ ಎಂಬ ಮಹಿಳೆ ಹಾಗೂ ಆಕೆಯ ತಂದೆಯ ವಿರುದ್ಧ ಫೆ.20 ರಂದು ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ಸಂಬಂಧ ಈ ವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಎಫ್ಐಆರ್ ಪ್ರಕಾರ ಅನಿಕ್ಷಾ ಎಂಬ ಮಹಿಳೆ ಅಮೃತಾ ಫಡ್ನವೀಸ್ ಅವರೊಂದಿಗೆ 16 ತಿಂಗಳಿನಿಂದ ಸಂಪರ್ಕದಲ್ಲಿದ್ದರು ಹಾಗೂ ಅವರ ನಿವಾಸಕ್ಕೂ ಭೇಟಿ ನೀಡಿದ್ದರು.

ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆಗಾಗಿ ಕೆಂಪುಡುಗೆಯಲ್ಲಿ ಅಮೃತಾ ಫಡ್ನವೀಸ್ ಸಾಂಗ್; ವಿಡಿಯೋ ವೈರಲ್
 
ಡಿಸೈನರ್ ಆಗಿರುವ ಅನಿಕ್ಷಾ, ತಾವು ಡಿಸೈನ್ ಮಾಡಿರುವ ಉಡುಗೆ, ಆಭರಣ, ಪಾದರಕ್ಷೆಗಳನ್ನು ಧರಿಸಿ ಆ ಮೂಲಕ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಬೇಕೆಂದು ಅಮೃತಾ ಫಡ್ನವೀಸ್ ಗೆ ಮನವಿ ಮಾಡಿದ್ದರು. ತಾನು ತಾಯಿಯನ್ನು ಕಳೆದುಕೊಂಡಿದ್ದು, ಕುಟುಂಬದ ಹಣಕಾಸು ಸ್ಥಿತಿಯನ್ನು ನಿಭಾಯಿಸುತ್ತಿರುವುದಾಗಿ ಹೇಳಿಕೊಂಡಿದರು. ಈ ರೀತಿ ಅಮೃತಾ ಅವರ ವಿಶ್ವಾಸ ಗಳಿಸಿದ ಬಳಿಕ ಅನಿಕ್ಷಾ, ಕೆಲವು ಬುಕ್ಕಿಗಳ ಬಗ್ಗೆ ಮಾಹಿತಿಯನ್ನೂ ನೀಡಿ ಆ ಮೂಲಕ ಹಣ ಮಾಡಬಹುದೆಂದು ಹೇಳಿದ್ದರು. ಆ ನಂತರ ನೇರವಾಗಿ ಅಮೃತಾ ಅವರಿಗೆ 1 ಕೋಟಿ ರೂಪಾಯಿ ಹಣದ ಆಮಿಷವೊಡ್ಡಿ ತಮ್ಮ ತಂದೆಯನ್ನು ಪೊಲೀಸ್ ಪ್ರಕರಣವೊಂದರಿಂದ ಹೊರತರಲು ಸಹಾಯ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದರು ಅನಿಕ್ಷಾ ಅವರ ಈ ನಡೆಯಿಂದ ಬೇಸರಗೊಂಡಿದ್ದ ಅಮೃತಾ ಫಡ್ನವೀಸ್ ಆಕೆಯ ನಂಬರ್ ನ್ನು ಬ್ಲಾಕ್ ಮಾಡಿದ್ದರು. ಆದರೆ ಬೇರೊಂದು ನಂಬರ್ ನಿಂದ ಧ್ವನಿ ಸಂದೇಶ, ವಿಡಿಯೋ ಕ್ಲಿಪ್ ಗಳ ಮೂಲಕ ಅನಿಕ್ಷಾ ಹಾಗೂ ಆಕೆಯ ತಂದೆ ಇಬ್ಬರೂ ಅಮೃತಾ ಫಡ್ನವೀಸ್ ಅವರಿಗೆ ಬೆದರಿಕೆ ಹಾಕಿದ್ದರು ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.

SCROLL FOR NEXT