ದೇಶ

ಪಾಟ್ನಾ ರೈಲು ನಿಲ್ದಾಣದ ಟಿವಿಯಲ್ಲಿ ಪೋರ್ನ್ ಪ್ರಸಾರ: ಏಜೆನ್ಸಿಯ ಒಪ್ಪಂದ ರದ್ದು

Lingaraj Badiger

ಪಾಟ್ನಾ: ಪಾಟ್ನಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 10 ರಲ್ಲಿ ಅಳವಡಿಸಲಾದ ಟಿವಿಯಲ್ಲಿ ಪೋರ್ನ್ ಕ್ಲಿಪ್ ಅನ್ನು ಪ್ರದರ್ಶಿಸಿದ ಒಂದು ದಿನದ ನಂತರ, ರೈಲು ನಿಲ್ದಾಣದಲ್ಲಿ ಟಿವಿ ಜಾಹೀರಾತುಗಳನ್ನು ಪ್ರಸಾರ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ ಏಜೆನ್ಸಿಯ ಒಪ್ಪಂದವನ್ನು ರದ್ದುಗೊಳಿಸಿರುವುದಾಗಿ ರೈಲ್ವೆ ಇಲಾಖೆ ಸೋಮವಾರ ಹೇಳಿದೆ.

ಈಸ್ಟ್ ಸೆಂಟ್ರಲ್ ರೈಲ್ವೆಯ(ಇಸಿಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವೀರೇಂದ್ರ ಕುಮಾರ್ ಅವರು ಈ ಸಂಬಂಧ ಪ್ರಕಟಣೆ ನೀಡಿದ್ದು, ಏಜೆನ್ಸಿಯ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್(ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸ(ಜಿಆರ್‌ಪಿ)ರು ತಲಾ ಒಂದು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

"ಮಾರ್ಚ್ 19 ರಂದು ಪಾಟ್ನಾ ಜಂಕ್ಷನ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ 10 ರಲ್ಲಿ ನಡೆದ ಅಸಹ್ಯಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ದತ್ತಾ ಸ್ಟುಡಿಯೋ ಕಂಪನಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಒಂದು ಎಫ್‌ಐಆರ್ ಅನ್ನು ಆರ್‌ಪಿಎಫ್ ಮತ್ತು ಇನ್ನೊಂದನ್ನು ಜಿಆರ್‌ಪಿ ಐಟಿ ಕಾಯ್ದೆಯಡಿ ದಾಖಲಿಸಿದೆ.

"ಹಾಗೆಯೇ, ಅದರ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಈ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಮತ್ತು ಅದರ ಮೂಲಕ ಕಾರ್ಯನಿರ್ವಹಿಸುವ ಎಲ್ಲಾ ಟಿವಿಗಳ ಸಂಪರ್ಕ ಕಡಿತಗೊಳಿಸಲಾಗಿದೆ/ಲಾಗ್ ಔಟ್ ಮಾಡಲಾಗಿದೆ. ಘಟನೆ ಕುರಿತು ಆರ್‌ಪಿಎಫ್ ಮತ್ತು ಜಿಆರ್‌ಪಿ ತನಿಖೆ ನಡೆಸುತ್ತಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

SCROLL FOR NEXT